ಸಸ್ಯೋದ್ಯಾನಕ್ಕೆ ಮೀಸಲಿಟ್ಟ ಜಾಗ ಅನ್ಯ ಉದ್ದೇಶಕ್ಕಿಲ್ಲ

*ಸಚಿವ ರಾಮಲಿಂಗಾರೆಡ್ಡಿ ಭರವಸೆ *ವಿಜಯವಾಣಿ ವರದಿಗೆ ಸ್ಪಂದಿಸಿದ ಅಧಿಕಾರಿಗಳು
ಗಮನಸೆಳೆದ ವರದಿ
ಗಮನಸೆಳೆದ ವರದಿ
Published on: 

ಆನೇಕಲ್​ : ಜಿಗಣಿ ಸಮೀಪದ ಹೆನ್ನಾಗರ ಗ್ರಾಮದ ಸರ್ವೇ ನಂ.5ರಲ್ಲಿರುವ 52 ಎಕರೆ ಜಮೀನಿನಲ್ಲಿ ಉದ್ದೇಶಿತ ಬೊಟಾನಿಕಲ್​ ಪಾರ್ಕ್​ ನಿಮಾರ್ಣಕ್ಕೆ ಮೀಸಲಿಟ್ಟಿರುವ ಜಾಗವನ್ನು ಯಾವುದೇ ಕಾರಣಕ್ಕೂ ಒತ್ತುವರಿಗೆ ಅಥವಾ ಅನ್ಯ ಉದ್ದೇಶಗಳಿಗೆ ಬಳಸಲು ಬಿಡುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಚಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆನ್ನಾಗರದ ಜಮೀನಿನ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಉದ್ಯಾನ ನಿಮಾರ್ಣಕ್ಕೆ ಮೀಸಲಿಟ್ಟಿರುವ ಜಾಗದ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಹೆನ್ನಾಗರ ಗ್ರಾಮದ ಸರ್ವೇ ನಂ.5ರಲ್ಲಿರುವ 52 ಎಕರೆ ಜಮೀನನ್ನು ಬೊಟಾನಿಕಲ್​ ಪಾರ್ಕ್​ ನಿಮಾರ್ಣಕ್ಕಾಗಿ ಮೀಸಲಿಡಲಾಗಿದೆ. ಆದರೆ, ಹಲವು ವರ್ಷಗಳಿಂದ ಉದ್ಯಾನ ನಿಮಾರ್ಣ ಕಾರ್ಯ ಆರಂಭವಾಗದ ಹಿನ್ನೆಲೆಯಲ್ಲಿ ಜಮೀನು ಒತ್ತುವರಿಯಾಗುವ ಆತಂಕ ವ್ಯಕ್ತವಾಗಿದೆ. ಮೀಸಲಿಟ್ಟ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದಿರುವ ಕುರಿತು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಜಮೀನಿನ ಸಂರಕ್ಷಣೆ ಹಾಗೂ ಉದ್ಯಾನ ನಿಮಾರ್ಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ ಎಂದರು.

ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 18 ಕಿ.ಮೀ. ಒಳಗಿರುವ ಕಾರಣ ಬಗರ್​ಹುಕುಂ ಸಾಗುವಳಿ ಅಡಿ ಜಮೀನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ. ಅರಣ್ಯ ಇಲಾಖೆಯ ಜಮೀನಿನ ಒತ್ತುವರಿ ತೆರವುಗೊಳಿಸುವಂತೆ ಉಚ್ಚ ನ್ಯಾಯಾಲಯವೂ ಸೂಚಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪಣತ್ತೂರಿನಲ್ಲಿ ಟ್ರೀ ಪಾರ್ಕ್​ ಸ್ಥಾಪಿಸಲಾಗಿದೆ. ಬೆಂಗಳೂರಿನ ಲಾಲ್​ಬಾಗ್​ 240 ಎಕರೆ ಹಾಗೂ ಕಬ್ಬನ್​ ಪಾರ್ಕ್​ 100 ಎಕರೆ ವಿಸ್ತೀರ್ಣ ಹೊಂದಿವೆ. ಸುಮಾರು 1.4 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನಗಳ ಅಗತ್ಯವಿದೆ. ಗುಂಜೂರು ಸಮೀಪ 150 ಎಕರೆ ಪ್ರದೇಶ ಸೇರಿ ಬೆಂಗಳೂರು ಉತ್ತರ ಭಾಗ ಹಾಗೂ ತುರಹಳ್ಳಿ ಸಮೀಪದ ಅರಣ್ಯ ಇಲಾಖೆಯ ಜಾಗಗಳಲ್ಲಿ ಉದ್ಯಾನ ನಿರ್ಮಿಸುವ ಯೋಜನೆಯಿದೆ. ಈ ಸಂಬಂಧ ಅರಣ್ಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಗಮನಸೆಳೆದ ವರದಿ : ಹೆನ್ನಾಗರದ ಸಸ್ಯೋದ್ಯಾನಕ್ಕೆ ಮೀಸಲಿಟ್ಟಿರುವ 52 ಎಕರೆ ಜಮೀನು ಒತ್ತುವರಿ ಹಾಗೂ ರ್ನಿಲಕ್ಷ್ಯಕ್ಕೆ ಒಳಗಾಗುತ್ತಿರುವ ಕುರಿತು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿದ್ದು, ವರದಿಗೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಜಮೀನು ಸಂರಕ್ಷಣೆ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net