

ಹೊಸಕೋಟೆ: ಕಂದಾಯ, ತಾಲೂಕು ಪಂಚಾಯಿತಿ, ಆರೋಗ್ಯ, ಪಶುಸಂಗೋಪನೆ, ಶಿಕ್ಷಣ ಸೇರಿ ಸುಮಾರು 28 ವಿವಿಧ ಇಲಾಖೆಗಳ ಅಧಿಕಾರಿಗಳು ಒಂದೇ ಸೂರಿನಡಿ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವುದು ಹಾಗೂ ವಿಳಂಬವಾಗುವ ಪ್ರಕರಣಗಳಿಗೆ ಒಂದೆರಡು ವಾರದೊಳಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಗಣಗಲೂರು ಗ್ರಾಪಂನ ಶಿವನಾಪುರದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದರು.
105 ಕೋಟಿ ರೂ. ವೆಚ್ಚದ 66 ಕೆವಿ ವಿದ್ಯುತ್ ಸಬ್ ಸ್ಟೇಷನ್: ಈ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ 105 ಕೋಟಿ ರೂ. ವೆಚ್ಚದಲ್ಲಿ 66 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಆರು ತಿಂಗಳೊಳಗೆ ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು.
ಬಡವರಿಗೆ ನಿವೇಶನ: ತಾಲೂಕಿನ ಸುಮಾರು ಏಳು ಗ್ರಾಮಗಳಲ್ಲಿ ಒಟ್ಟು 28 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದ್ದು, ಆಶ್ರಯ ಯೋಜನೆಯಡಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ವಿಶೇಷವಾಗಿ ಶಿವನಾಪುರದಲ್ಲೇ 36 ಗುಂಟೆ ಜಮೀನನ್ನು ಗುರುತಿಸಲಾಗಿದ್ದು, ಅರ್ಹರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಇನ್ನು ಶಿವನಾಪುರದ ಸರ್ವೇ ನಂ.21ರಲ್ಲಿ 30&50 ವರ್ಷಗಳಿಂದ ಭೂಮಿ ಮಂಜೂರಾಗಿದ್ದರೂ ಪೋಡಿಯಾಗದೆ ಬಾಕಿ ಉಳಿದಿದ್ದ ರೈತರ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಈ ಕಾರ್ಯಕ್ರಮದಲ್ಲೇ 71 ರೈತರಿಗೆ ನೋಟಿಸ್ ವಿತರಿಸಲಾಗುತ್ತಿದ್ದು, ಸೋಮವಾರದಿಂದಲೇ ಭೂಮಾಪನ ಕಾರ್ಯ ಆರಂಭಿಸಿ ದಾಖಲೆ ಹೊಂದಿರುವ ಅರ್ಹ ರೈತರಿಗೆ ಪೋಡಿ ಮಾಡಿಕೊಡಲಾಗುವುದು.
ಇ-ಖಾತಾ ವಿತರಣೆ: ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬಿ-&ಖಾತಾ ಹೊಂದಿರುವವರಿಗೆ ಹಾಗೂ ತಮ್ಮದೇ ಜಮೀನು, ತೋಟ, ಹೊಲಗಳಲ್ಲಿ ಮನೆ ನಿರ್ಮಿಸಿಕೊಂಡು ಇಸಿ ಮತ್ತು ಸೇಲ್ ಡೀಡ್ ದಾಖಲೆ ಹೊಂದಿರುವವರಿಗೆ ಇ&-ಖಾತಾ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನ 28 ಗ್ರಾಪಂಗಳಲ್ಲೂ ಇದನ್ನು ಒಂದು ಆಂದೋಲನದಂತೆ ಕೈಗೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪುವಂತೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ 268 ಅಹವಾಲುಗಳನ್ನು ಸ್ವೀಕರಿಸಲಾಯಿತು. ಅದರಲ್ಲಿ ಕಂದಾಯ ಇಲಾಖೆ 127, ಪಂಚಾಯಿತಿ ಅಭಿವೃದ್ಧಿ ಇಲಾಖೆ 110, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 17, ಸರ್ವೇ ಇಲಾಖೆ 9, ಬೆಸ್ಕಾಂ 3, ಲೋಕೋಪಯೋಗಿ 1 ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 1 ಅಹವಾಲು ಸ್ವೀಕರಿಸಲಾಯಿತು.