ನಾಡ ಪಿಸ್ತೂಲ್​ ಮಾರಾಟ ಮತ್ತೆ 6 ಮಂದಿ ಬಂಧನ

*ಒಟ್ಟೂ 5 ಬಂದೂಕು ಜಪ್ತಿ *ಬಂಧಿತರಲ್ಲಿ ಇಬ್ಬರು ರೌಡಿಶೀಟರ್​ಗಳು *ಆನೇಕಲ್​ ಉಪವಿಭಾಗದ ಪೊಲೀಸರಿಂದ ಕಾರ್ಯಾಚರಣೆ
ಮಧ್ಯಪ್ರದೇಶದ ಪ್ರದೀಪ್
ಮಧ್ಯಪ್ರದೇಶದ ಪ್ರದೀಪ್
Published on

ಆನೇಕಲ್​ : ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಅಕ್ರಮವಾಗಿ ಕಂಟ್ರಿಮೇಡ್​ ಪಿಸ್ತೂಲ್​ಗಳನ್ನು ಪೂರೈಸುತ್ತಿದ್ದ ಜಾಲವನ್ನು ಆನೇಕಲ್​ ಉಪವಿಭಾಗದ ಪೊಲೀಸರು ಭೇದಿಸಿದ್ದು, ಇಬ್ಬರು ರೌಡಿಶೀಟರ್​ ಸೇರಿ ಮತ್ತೆ 6 ಮಂದಿಯನ್ನು ಬಂಧಿಸಿದ್ದಾರೆ. ಹಾಗೆಯೇ 2 ಕಂಟ್ರಿಮೇಡ್​ ಪಿಸ್ತೂಲ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಕೆ.ಜಿ.ನಗರದ ರಿಜ್ವಾನ್​ ಪಾಷಾ ಅಲಿಯಾಸ್​ ಕುಳ್ಳ ರಿಜ್ವಾನ್​ (36), ಮನೋಜ್​ (28), ವೆಂಕಟರಾಜು (26), ಶಿವರಾಜ್​ (30), ಗೋಪಿ (28) ಹಾಗೂ ನಂಜಪ್ಪ (30) ಬಂಧಿತರು. ರಿಜ್ವಾನ್​ ಪಾಷಾ ಮತ್ತು ಮನೋಜ್​ ಕೆ.ಜಿ.ಹಳ್ಳಿ ಠಾಣೆ ರೌಡಿಶೀಟರ್​ಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆ.14ರಂದು ಅತ್ತಿಬೆಲೆ&ಆನೇಕಲ್​ ರಸ್ತೆಯ ಹಾಲ್ದೇನಹಳ್ಳಿ ರೈಲ್ವೆಗೇಟ್​ ಸಮೀಪ ಅನುಮಾನಾಸ್ಪದವಾಗಿ ಬ್ಯಾಗ್​ ಹಿಡಿದು ನಿಂತಿದ್ದ ಮಧ್ಯಪ್ರದೇಶ ಪ್ರದೀಪ್ ​(30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ ಮೂರು ಕಂಟ್ರಿಮೇಡ್​ ಪಿಸ್ತೂಲ್​ ಹಾಗೂ 10 ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಪ್ರದಿಪ್​ನನ್ನು ಪೊಲೀಸರು ವಶಕ್ಕೆ ಪಡೆದು ಅಕ್ರಮ ಶಸ್ತ್ರಾಸ್ತ್ರ ಜಾಲದ ತನಿಖೆ ಆರಂಭಿಸಿದ್ದರು. ಮಧ್ಯಪ್ರದೇಶದಿಂದ ಬೆಂಗಳೂರಿಗೆ ರೈಲು ಮೂಲಕ ಪಿಸ್ತೂಲ್​ಗಳನ್ನು ತಂದು ಮಾರಾಟ ಮಾಡುತ್ತಿರುವ ಬಗ್ಗೆ ಪ್ರದಿಪ್​ ಬಾಯ್ಬಿಟ್ಟಿದ್ದ. ಈಗಾಗಲೇ ಎರಡು ಪಿಸ್ತೂಲ್​ಗಳನ್ನು ಕೆ.ಜಿ.ಹಳ್ಳಿಯ ರಿಜ್ವಾನ್​ ಪಾಷಾ ಅಲಿಯಾಸ್​ ಕುಳ್ಳ ರಿಜ್ವಾನ್​ ಹಾಗೂ ಮನೋಜ್​ ಎಂಬುವವರಿಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಬಳಿಕ ಈ ಇಬ್ಬರು ಸೇರಿ ಒಟ್ಟು 6 ಮಂದಿಯನ್ನು ಬಂಧಿಸಿ ಪಿಸ್ತೂಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 3 ಪಿಸ್ತೂಲ್​ ಹಾಗೂ 10 ಗುಂಡುಗಳು ಪತ್ತೆಯಾಗಿದ್ದು, ನಂತರ ಇನ್ನೆರಡು ಪಿಸ್ತೂಲ್​ಗಳು ಸೇರಿ ಒಟ್ಟು ಐದು ಅಕ್ರಮ ಪಿಸ್ತೂಲ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ತನಿಖೆ ಚುರುಕು? : ಮಧ್ಯಪ್ರದೇಶದ ಬೇಡಘಾಟ್​ನ ದಾವೂದ್​ ಎಂಬಾತ ಪಿಸ್ತೂಲ್​ಗಳ ಪೂರೈಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದಕ್ಕೆ ಮಾತ್ರ ಪ್ರಕರಣವು ಸೀಮಿತವಾಗಿದೆಯೇ ಅಥವಾ ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಸ್ತೂಲ್​ಗಳನ್ನು ಮಧ್ಯಪ್ರದೇಶದಿಂದ ಯಾರು ಪೂರೈಸುತ್ತಿದ್ದರು?, ಬೆಂಗಳೂರಿನಲ್ಲಿ ಯಾರಿಗೆ ಮಾರಾಟ ಮಾಡಲಾಗುತ್ತಿತ್ತು?, ಈ ಹಿಂದೆ ಎಷ್ಟು ಬಾರಿ ಶಸ್ತ್ರಾಸ್ತ್ರಗಳನ್ನು ನಗರಕ್ಕೆ ತರಲಾಗಿದೆ ? ಹಾಗೂ ಇನ್ನೂ ಯಾರ್ಯಾರು ಈ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆ ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ಪ್ರಕರಣ ದಾಖಲು : ಬಂಧಿತ ಆರೋಪಿಗಳ ಹಿಂದಿನ ಪ್ರಕರಣಗಳು ಹಾಗೂ ಪರಸ್ಪರ ಸಂಪರ್ಕದ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಜಾಲದ ಉಳಿದ ಕೊಂಡಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ಪ್ರಕರಣದಲ್ಲಿ ಇನ್ನಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net