ಸಂಚಾರ ಸಿಕ್ಕು ಪರಿಹರಿಸದಿದ್ದರೆ ಪ್ರತಿಭಟನೆ

> ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶಾಸಕ ಎನ್​.ಶ್ರೀನಿವಾಸ್​ ಎಚ್ಚರಿಕೆ
ನೆಲಮಂಗಲ ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಎನ್​.ಶ್ರೀನಿವಾಸ್​ ಮಾತನಾಡಿದರು. ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ಆರಕ್ಷಕ ನಿರೀಕ್ಷಕ ಭರತ್​ಗೌಡ, ಶಿರಸ್ತೇದಾರ್​ ಪುಷ್ಪಲತಾ, ರಾಜಸ್ವ ನಿರೀಕ್ಷಕ ಚಂದ್ರಶೇಖರ್​, ತಾಲೂಕು ಪಂಚಾಯಿತಿ ಇಒ ಡಾ.ಬಿಂದು, ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಇದ್ದರು.
ನೆಲಮಂಗಲ ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಎನ್​.ಶ್ರೀನಿವಾಸ್​ ಮಾತನಾಡಿದರು. ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ಆರಕ್ಷಕ ನಿರೀಕ್ಷಕ ಭರತ್​ಗೌಡ, ಶಿರಸ್ತೇದಾರ್​ ಪುಷ್ಪಲತಾ, ರಾಜಸ್ವ ನಿರೀಕ್ಷಕ ಚಂದ್ರಶೇಖರ್​, ತಾಲೂಕು ಪಂಚಾಯಿತಿ ಇಒ ಡಾ.ಬಿಂದು, ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಇದ್ದರು.
Published on: 

ನೆಲಮಂಗಲ: ನಗರದ ಕುಣಿಗಲ್​ ವೃತ್ತದ ಬಳಿ ನಿತ್ಯ ಟ್ರಾಫಿಕ್​ ಸಮಸ್ಯೆ ಎದುರಾಗಿದ್ದು, ಜನಸಾಮಾನ್ಯರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಿದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವ ಬಾಲಕೃಷ್ಣ, ಕುಣಿಗಲ್​ ಶಾಸಕ ಡಾ.ರಂಗನಾಥ್​ ಹಾಗೂ ನಾನು ಮುಂದಿನ ದಿನಗಳಲ್ಲಿ ಪಿಡಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.

ತಾಲೂಕು ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದಲ್ಲಿ ಮಾತನಾಡಿದ ಅವರು, ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರಕ್ಕೂ ಮಾಹಿತಿ ನೀಡಿದ್ದು, ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.

ಗೊಲ್ಲಹಳ್ಳಿ ರಸ್ತೆ ಸಮಸ್ಯೆ: ತಾಲೂಕಿನಿಂದ ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ 2016ರಲ್ಲೇ ಆರಂಭಗೊಂಡಿದೆ. ಆದರೆ, ಪೂರ್ಣಗೊಂಡಿಲ್ಲ. ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸಚಿವರು ಹಾಗೂ ಅಧಿಕಾರಗಳನ್ನು ಸ್ಥಳಕ್ಕೆ ಕರೆದು, ಸಮಸ್ಯೆ ಪರಿಹರಿಸಲು ಮನವಿ ಮಾಡಲಾಗಿತ್ತು. ಇದೀಗ ಗುತ್ತಿಗೆದಾರರ ಮನವೊಲಿಸಿ ತಾತ್ಕಾಲಿಕವಾಗಿ ರಸ್ತೆಯಲ್ಲಿ ಗುಂಡಿ ಮುಚ್ಚಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು ಶಾಸಕರು ಮಾಹಿತಿ ನೀಡಿದರು.

ಮೌಲಾನಾ ಅಬ್ದುಲ್​ ಕಲಾಂ ಶಾಲೆ ಸ್ಥಳಾಂತಕ್ಕೆ ಮನವಿ: ನಗರಸಭೆ ವ್ಯಾಪ್ತಿಯ ಬಸವನಹಳ್ಳಿ ಬಳಿಯ ಎಸ್​ಎಲ್​ವಿ ಬಡಾವಣೆ, ಮಂಜುನಾಥ ನಗರ, ಸರ್ವ ಮಂಗಳ ಬಡಾವಣೆ, ಲ್ಮವೆಂಕಟೇಶ್ವರ ಬಡಾವಣೆ, ಹನುಮೇಗೌಡ ಬಡಾವಣೆ ಹಾಗೂ ಬೈರವೇಶ್ವರ ಬಡಾವಣೆಗೆ ಹೊಂದಿಕೊಂಡಿರುವ 9 ಗುಂಟೆ ಸಿಎ ಜಾಗವನ್ನು ಶಾಲೆಗೆ ನೆ.ಯೋ.ಪ್ರಾಧಿಕಾರದಿಂದ ಮಂಜೂರು ಮಾಡಿದ್ದಾರೆ. 5 ಬಡಾವಣೆ ಮಕ್ಕಳಿಗೆ ಅನುಕೂಲವಾಗುವಂತೆ ಜಾಗವನ್ನು ಮೀಸಲಿರಿಸಿ ಈಗಾಗಲೇ ಇಸ್ಲಾಂಪುರ ಗ್ರಾಮದ ಬಳಿಭೂಮಿ ಪೂಜೆ ಮಾಡಿದ್ದು, ಶಾಲೆಯ ಜಾಗವನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕು ಎಂದು ಬಡಾವಣೆ ನಿವಾಸಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.

ಅಲೆದಾಡುವ ಕಾಲ ಮುಗಿದಿದೆ: ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆದಾಡುವ ಕಾಲ ಮುಗಿದಿದೆ. ಸ್ಥಳಿಯ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತ್ವರಿತವಾಗಿ ಪರಿಹರಿಸುವ ಸದುದ್ದೇಶದಿಂದ, ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಆಂದೋಲನದ ರೂಪಿಸಲಾಗಿದೆ ಎಂದು ಶಾಸಕ ಶ್ರೀನಿವಾಸ್​ ತಿಳಿಸಿದರು.

87 ಅರ್ಜಿ ಸ್ವೀಕಾರ: ಸಾರ್ವಜನಿಕರು ಖಾತೆಗಳು, ಇ&ಸ್ವತ್ತು, ಪಹಣಿ, ಪೌತಿ ಖಾತೆ, ಜಮೀನು ಸರ್ವೆ, ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸುಮಾರು 87 ಅರ್ಜಿಯನ್ನು ಸಭೆಯಲ್ಲಿ ಶಾಸಕರು ಸ್ವೀಕರಿಸಿದರು. ನಗರಸಭೆ ಸದಸ್ಯ ಪ್ರದಿಪ್​, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ.ನಾರಾಯಣ್​ಗೌಡ, ಮಾಜಿ ಸದಸ್ಯ ಬಿ.ಜಿ.ವಾಸು, ಮುಖಂಡ ಕೆ.ಕೃಷ್ಣಪ್ಪ, ಕೆ.ವಸಂತ್​, ಶೈಲೇಂದ್ರ, ಮುನಿಯಪ್ಪ, ಚಿಕ್ಕೇಗೌಡ, ಮನುಕುಮಾರ್​ ಇದ್ದರು.