ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆ ಪಟ್ಟು

* ಡಿ.7ಕ್ಕೆ ದೊಡ್ಡಬಳ್ಳಾಪುರದಲ್ಲಿನ ಕನ್ನಡೇತರ ಹೆಸರುಗಳ ತೆರವಿಗೆ ಸಿದ್ಧತೆ
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಮುಖಂಡರಾದ ತ.ನ ಪ್ರಭುದೇವ್​, ರಾಜಘಟ್ಟ ರವಿ, ಜಿ.ಸುರೇಶ್​, ಗೋವಿಂದರಾಜು, ಡಿ.ಪಿ.ಆಂಜನೇಯ, ಜೋಗಹಳ್ಳಿ ಅಮ್ಮು, ಜೆ.ಶಿವಕುಮಾರ್​, ಅಗ್ನಿ ವೆಂಕಟೇಶ್​, ಮುನಿಪಾಪಯ್ಯ ಇತರರು ಇದ್ದರು.
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಮುಖಂಡರಾದ ತ.ನ ಪ್ರಭುದೇವ್​, ರಾಜಘಟ್ಟ ರವಿ, ಜಿ.ಸುರೇಶ್​, ಗೋವಿಂದರಾಜು, ಡಿ.ಪಿ.ಆಂಜನೇಯ, ಜೋಗಹಳ್ಳಿ ಅಮ್ಮು, ಜೆ.ಶಿವಕುಮಾರ್​, ಅಗ್ನಿ ವೆಂಕಟೇಶ್​, ಮುನಿಪಾಪಯ್ಯ ಇತರರು ಇದ್ದರು.
Published on: 

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಕನ್ನಡ ಕಡ್ಡಾಯ ನಾಮಫಲಕಗಳ ವಿಚಾರವಾಗಿ ಆದೇಶ ಹೊರಡಿಸಿದೆ. ಆದರೆ ಇಲ್ಲಿಯವರೆಗೂ ಕೆಲ ವಾಣಿಜ್ಯೋದ್ಯಮಿಗಳು ನಿಯಮ ಉಲ್ಲಂಘಿಸಿ ವಾಣಿಜ್ಯ ಸ್ಥಳಗಳಲ್ಲಿ ಕನ್ನಡೇತರ ನಾಮಫಲಕಗಳ ಬಳಸುತ್ತಿದ್ದಾರೆ. ಇಂತಹ ಕನ್ನಡೇತರ ನಾಮಫಲಕ ಕೂಡಲೇ ತೆರವುಗೊಳಿಸಬೇಕು ಎಂದು ಕನ್ನಡಪರ ಹೋರಾಟಗಾರ ಸಂಜೀವ್​ ನಾಯಕ್​ ಒತ್ತಾಯಿಸಿದರು.

ಕನ್ನಡ ಸಂಘಟನೆಗಳ ಒಕ್ಕೂಟ (ದೊಡ್ಡಬಳ್ಳಾಪುರ) ತಾಲೂಕು ವತಿಯಿಂದ ನಗರದ ಕನ್ನಡ ಜಾಗೃತ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡೇತರ ನಾಮಫಲಕ ತೆರವು ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಿ.7ರಂದು ನಗರಸಭೆ, ಪೊಲೀಸ್​ ಅಧಿಕಾರಿಗಳ ಸಹಯೋಗದೊಂದಿಗೆ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸಲಾಗುವುದು. ಈ ಬಾರಿ ನಮ್ಮ ಹೋರಾಟ ಫಲ ನೀಡಲೆಬೇಕು. ಭಾಷೆಯ ಉಳಿವಿಗಾಗಿ ಒಂದಾಗೋಣ ಎಂದರು.

ಅಧಿಕಾರಿಗಳು ಸಭೆ ಕರೆಯಲಿ: ಕನ್ನಡೇತರ ನಾಮಫಲಕ ತೆರವುಗೊಳಿಸಲು ಡಿ.7ರಂದು ನಿರ್ಧರಿಸಿದ್ದು, ತಾಲೂಕು ದಂಡಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಸಭೆ ಕರೆದು ಕನ್ನಡೇತರ ನಾಮಫಲಕಗಳ ತೆರವು ಕಾರ್ಯಾಚರನೆ ಕುರಿತು ಸೂಕ್ತ ರ್ನಿಣಯ ಕೈಗೊಳ್ಳಲಿ. ಇಲ್ಲವೇ ಡಿ.7ರಂದು ತಾಲೂಕಿನಾದ್ಯಂತ ಕನ್ನಡೇತರ ನಾಮಫಲಕಗಳನ್ನು ಕನ್ನಡ ಪರ ಸಂಘಟನೆ ಹೋರಾಟಗಾರರು ತೆರವುಗೊಳಿಸಲು ಮುಂದಾಗಲಿದ್ದೇವೆ ಎಂದು ಸಭೆಯಲ್ಲಿ ಕನ್ನಡಪರ ಹೋರಾಟಗಾರರು ತಿಳಿಸಿದರು.

ಮೊದಲು ನಗರಸಭೆ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ನಡೆಸುವಂತೆ ತಿಳಿಸೋಣ. ಅಧಿಕಾರಿಗಳು ಸ್ಪಂದಿಸದಿದ್ದರೆ ಸುದ್ದಿಗೋಷ್ಠಿ ಮೂಲಕ ನಮ್ಮ ಹೋರಾಟ ಪ್ರಾರಂಭಿಸೋಣ. ಪ್ರತಿ ಮುಂಜಾನೆ ಸಾರ್ವಜನಿಕರ ಮನೆಬಾಗಿಲಿಗೆ ಹೋಗುವ ನಗರಸಭೆ ಕಸದ ಗಾಡಿಗಳ ಮೂಲಕ, ಇತರ ಮಾಧ್ಯಮಗಳನ್ನು ಬಳಸಿಕೊಂಡು ಕನ್ನಡೇತರ ನಾಮಫಲಕ ತೆರವು ಮಾಡುವಂತೆ ಮಾಹಿತಿ ರವಾನಿಸೋಣ. ನಾಮಫಲಕ ತೆರವಿಗೆ ಅಂತಿಮ ದಿನಾಂಕ ನಿಗದಿ ಮಾಡಿ ಅಧಿಕಾರಿಗಳ ಸಹಯೋಗದಲ್ಲಿ ಈ ಕಾರ್ಯಕ್ಕೆ ಮುಂದಾಗುವುದು ಉತ್ತಮ ಎಂದು ಕನ್ನಡಪರ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡರಾದ ಮಲ್ಲೇಶ್​, ಹಮಾಮ್​ ವೆಂಕಟೇಶ್​, ವೇಣು, ರಮೇಶ್​, ವೆಂಕಟೇಶ್​, ಹಲವು ಸಂಘಟನೆಗಳ ಪ್ರಮುಖರು ಇದ್ದರು.