ಹೆನ್ನಾಗರ ಗೋಮಾಳಕ್ಕೆ ಬೇಕಿದೆ ರಕ್ಷಣೆ

ಮೀಸಲಿಟ್ಟ ಭೂಮಿ ಉದ್ದೇಶಿತ ಯೋಜನೆಗಳಿಗೆ ಬಳಕೆಯಾಗಲಿ - ಭೂಗಳ್ಳರ ಹಾವಳಿ ತಡೆಗೆ ಸ್ಥಳಿಯರ ಒತ್ತಾಯ
Hennagara grazing land needs protection.
ಆನೇಕಲ್​ ತಾಲೂಕಿನ ಹೆನ್ನಾಗರ ಗೋಮಾಳ.Hennagara grazing land needs protection.
Published on: 

ಆನೇಕಲ್​: ತಾಲೂಕಿನಲ್ಲಿ ಭೂಮಿಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮಧ್ಯೆಯೇ ಜಿಗಣಿ ಹೋಬಳಿಯ ಹೆನ್ನಾಗರ ಸರ್ವೇ ನಂ.5ರಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಗೋಮಾಳ ಸಂರಕ್ಷಣೆ ಇಲ್ಲದೆ ಕಬಳಿಕೆ ಆತಂಕ ಎದುರಿಸುತ್ತಿದೆ.

ಸುಮಾರು 78.5 ಎಕರೆ ವಿಸ್ತೀರ್ಣದ ಈ ಜಾಗದಲ್ಲಿ ಅರಣ್ಯ ಇಲಾಖೆಗೆ ಬೊಟಾನಿಕಲ್​ ಗಾರ್ಡನ್​ ನಿಮಾರ್ಣ ಹಾಗೂ ಸಂರಕ್ಷಣೆಗಾಗಿ 52.25 ಎಕರೆ ಜಾಗವನ್ನು 1995ರಲ್ಲಿಯೇ ವರ್ಗಾಯಿಸಿದ್ದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಪರಿಣಾಮ ಭೂಕಬಳಿಕೆದಾರರ ಕಣ್ಣು ಈಗ ಗೋಮಾಳದ ಮೇಲೆ ಬೀಳುತ್ತಿದೆ. ಹಲವು ವರ್ಷಗಳಿಂದ ಯಾವುದೇ ಕ್ರಮ ಕೈಗೊಳ್ಳದೇ ಜಾಗವನ್ನು ಹಾಗೇ ಬಿಟ್ಟರೆ, ಮೊದಲು ಶೆಡ್​ಗಳನ್ನು ನಿರ್ಮಿಸಿ, ಬಳಿಕ ಬಾಡಿಗೆ ಮನೆಗಳು ಸೇರಿದಂತೆ ವಿವಿಧ ರೀತಿಯ ಅನಧಿಕೃತ ಕಟ್ಟಡ ನಿಮಾರ್ಣಗಳ ಮೂಲಕ ಹಂತಹಂತವಾಗಿ ಒತ್ತುವರಿ ಮಾಡುವ ಸಾಧ್ಯತೆ ಇದೆ ಎಂಬುದು ಸ್ಥಳಿಯರ ಆತಂಕ.

ವಿವಿಧ ಉದ್ದೇಶಗಳಿಗೆ ಮೀಸಲು: ಒಟ್ಟು 78.5 ಎಕರೆ ಈ ಜಾಗವಿದಲ್ಲಿ ಬೊಟಾನಿಕಲ್​ ಗಾರ್ಡನ್​ ನಿಮಾರ್ಣ ಹಾಗೂ ಸಂರಕ್ಷಣೆಯ ಉಸ್ತುವಾರಿಗಾಗಿ 52.25 ಎಕರೆಯನ್ನು ಅರಣ್ಯ ಇಲಾಖೆಗೆ ಮೀಸಲಿಡಲಾಗಿದೆ. ಸರ್ಕಾರಿ ಪ್ರೌಢಶಾಲೆಯ ಆಟದ ಮೈದಾನಕ್ಕಾಗಿ 8 ಎಕರೆ, ಸಾರ್ವಜನಿಕ ಸ್ಮಶಾನಕ್ಕಾಗಿ 7 ಎಕರೆ, ಯಲ್ಲಮ್ಮದೇವಿ ದೇವಾಲಯಕ್ಕಾಗಿ 2.20 ಎಕರೆ, ಆಶ್ರಯ ಯೋಜನೆ ಮನೆಗಳ ನಿಮಾರ್ಣಕ್ಕೆ 8 ಎಕರೆ, ಭೂಕಂದಾಯ ಕಾಯ್ದೆ&1964ರ ಕಲಂ 94ಸಿಸಿ ಅಡಿಯಲ್ಲಿ 1 ಎಕರೆ ಹಾಗೂ ಕಾವೇರಿ ನೀರು ಸಂಗ್ರಹಣಾ ಟ್ಯಾಂಕ್​ಗಾಗಿ 7 ಗುಂಟೆ ಜಾಗ ಮೀಸಲಿಡಲಾಗಿದೆ. ಈ ಪೈಕಿ ಅರಣ್ಯ ಇಲಾಖೆಗೆ ಬೊಟಾನಿಕಲ್​ ಗಾರ್ಡನ್​ ನಿಮಾರ್ಣಕ್ಕಾಗಿ ಮೀಸಲಿಟ್ಟಿರುವ 52.25 ಎಕರೆ ಜಾಗವೇ ಹಲವು ವರ್ಷಗಳಿಂದ ರ್ನಿಲಕ್ಷ್ಯಕ್ಕೆ ಒಳಗಾಗಿದೆ. ಜಾಗವನ್ನು ಸೂಕ್ತವಾಗಿ ಗುರುತಿಸಿ ಬೇಲಿ ನಿರ್ಮಿಸಿ ಸಂರಕ್ಷಿಸದಿರುವುದರಿಂದ ಅನಧಿಕೃತ ಪ್ರವೇಶ ಹಾಗೂ ಒತ್ತುವರಿಗೆ ಅವಕಾಶವಾಗುವ ಪರಿಸ್ಥಿತಿ ನಿಮಾರ್ಣವಾಗಿದೆ.

ಅಲ್ಲಲ್ಲಿ ಶೆಡ್​ ನಿರ್ಮಾಣ: ಸರ್ವೇ ನಂ.5ರಲ್ಲಿನ ಸರ್ಕಾರಿ ಜಾಗದ ಕೆಲ ಭಾಗಗಳಲ್ಲಿ ಈಗಾಗಲೇ ಶೆಡ್​ಗಳನ್ನು ನಿರ್ಮಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆರಂಭದಲ್ಲಿಯೇ ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶವನ್ನು ಅತಿಕ್ರಮಿಸುವ ಸಾಧ್ಯತೆ ಇದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ, ಜಾಗದ ಸರ್ವೇ ಮಾಡಿಸಬೇಕು. ಬೊಟಾನಿಕಲ್​ ಗಾರ್ಡನ್​ ಜಾಗಕ್ಕೆ ಸೂಕ್ತ ಬೇಲಿ ನಿರ್ಮಿಸಿ, ಸರ್ಕಾರಿ ಜಾಗ ಹಾಗೂ ಅರಣ್ಯ ಇಲಾಖೆಗೆ ಮೀಸಲು ಎಂಬ ಫಲಕಗಳನ್ನು ಅಳವಡಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

30 ವರ್ಷಗಳ ಹೋರಾಟ: 1995ರಲ್ಲಿ ಅರಣ್ಯ ಇಲಾಖೆಗೆ ಜಾಗ ಮಂಜೂರಾದರೂ ಇದುವರೆಗೆ ಬೊಟಾನಿಕಲ್​ ಗಾರ್ಡನ್​ ನಿಮಾರ್ಣವಾಗದಿರುವ ಕಾರಣ ಕಳೆದ ಮೂರು ದಶಕಗಳಿಂದ ಸ್ಥಳಿಯರು ಹೋರಾಟ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಈ ಹಿಂದೆ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾ.ನಾಗರತ್ನ ಅವರು ಅರಣ್ಯ ಇಲಾಖೆಯ ಕ್ರಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬುದನ್ನು ಹೋರಾಟಗಾರರು ಸ್ಮರಿಸಿದರು.

ಸ್ಥಳಿಯರ ಒತ್ತಾಸೆ: ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಸರ್ಕಾರಿ ಜಾಗವನ್ನು ಯಾವುದೇ ಕಾರಣಕ್ಕೂ ಒತ್ತುವರಿಗೆ ಅಥವಾ ದುರುಪಯೋಗಕ್ಕೆ ಅವಕಾಶ ನೀಡಬಾರದು. ಅರಣ್ಯ ಇಲಾಖೆಗೆ ಮೀಸಲಿಟ್ಟಿರುವ 52.25 ಎಕರೆ ಪ್ರದೇಶದಲ್ಲಿ ಬೊಟಾನಿಕಲ್​ ಗಾರ್ಡನ್​ ನಿರ್ಮಿಸಿ, ಜಾಗವನ್ನು ಹಸಿರು ವಲಯವಾಗಿ ಅಭಿವೃದ್ಧಿಪಡಿಸಬೇಕು. ಯೋಜನೆಯನ್ನು ತಕ್ಷಣವೇ ಕಾರ್ಯರೂಪಕ್ಕೆ ತರಬೇಕು ಎಂಬುದು ಸ್ಥಳಿಯರ ಒತ್ತಾಸೆ.

ಸಾಗುವಳಿ ಚೀಟಿಗೆ ಪಟ್ಟು: ಇದೇ ಗೋಮಾಳದಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ದಲಿತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಹೋರಾಟಗಾರ ಎಚ್​.ಹೊಸಹಳ್ಳಿ ವೆಂಕಟೇಶ್​ ಆಗ್ರಹಿಸಿದರು.

ಸದರಿ ಗೋಮಾಳದಲ್ಲಿ 25 ದಲಿತ ಕುಟುಂಬಗಳು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಜಮೀನು ಹಕ್ಕುಪತ್ರಕ್ಕಾಗಿ ಈಗಾಗಲೇ ಸರ್ಕಾರಕ್ಕೆ ನಮೂನೆ&50 ಹಾಗೂ 53ರಡಿ ಅರ್ಜಿ ಸಲ್ಲಿಸಲಾಗಿದೆ. ಹಾಗಾಗಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಹೆನ್ನಾಗರ ಗ್ರಾಮದಲ್ಲಿ ಸುದ್ದಿಗೋಷ್ಠಿ ಮೂಲಕ ಆಗ್ರಹಿಸಿದರು.

2003-04ರಲ್ಲೆ ಮಂಜೂರಾತಿ?: ಆನೇಕಲ್​ ತಾಲೂಕು ಭೂಮಂಜೂರಾತಿ ಸಮಿತಿಯಲ್ಲಿ 2003&04ರ ಸಾಲಿನಲ್ಲೇ ಭೂಮಂಜೂರಾತಿ ಆಗಿ, ಸಾಗುವಳಿ ಚೀಟಿ ವಿತರಿಸಲು ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಹೆನ್ನಾಗರದ ಈ ಗೋಮಾಳ ಸಹ ಸೇರಿದೆ. ಈ ಸಂಬಂಧ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಪ್ರಕರಣ ಸಂಖ್ಯೆ 116/2015ರಲ್ಲಿ ವಿಚಾರಣೆ ನಡೆದಿದ್ದು, ರೈತರ ಪರವಾಗಿ ಆದೇಶವಾಗಿದೆ. ಮುಂದುವರಿದು, ರಿಟ್​ ಅರ್ಜಿ ಸಂಖ್ಯೆ 15077/2022ರಲ್ಲಿಯೂ ಮೂರು ತಿಂಗಳೊಳಗೆ ಅರ್ಹರಿಗೆ ಸಾಗುವಳಿ ಚೀಟಿ ವಿತರಿಸಲು ಆದೇಶವಾಗಿತ್ತು. ಹಾಗಾಗಿ ಅಧಿಕಾರಿಗಳು ಇನ್ನಾದರೂ ಸಾಗುವಳಿ ಚೀಟಿ ನೀಡಬೇಕು ಎಂದು ವೆಂಕಟೇಶ್​ ಒತ್ತಾಯಿಸಿದರು.

1995ರಲ್ಲಿಯೇ ಬೊಟಾನಿಕಲ್​ ಗಾರ್ಡನ್​ ನಿಮಾರ್ಣಕ್ಕಾಗಿ ಅರಣ್ಯ ಇಲಾಖೆಗೆ ಜಾಗ ಮಂಜೂರು ಮಾಡಲಾಗಿದೆ. ಆದರೆ, ತಾಂತ್ರಿಕ ಕಾರಣ ನೆಪದಲ್ಲಿ ಇಂದಿಗೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಗೋಮಾಳ ಭೂಕಬಳಿಕೆದಾರರ ಪಾಲಾಗುವ ಆತಂಕ ಎದುರಾಗಿದೆ. ಮೂರು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರಿ ಜಾಗಸಂರಕ್ಷಿಸಿ, ಉದ್ದೇಶಿತ ಯೋಜನೆ ಜಾರಿಗೊಳಿಸಬೇಕು.
- ಎಂ.ಬಾಬುರೆಡ್ಡಿ ಹೆನ್ನಾಗರ ಗ್ರಾಮಸ್ಥ
ಸರ್ವೇನಂ.5ರ ಸಂಪೂರ್ಣ ಜಾಗವನ್ನು ಅಧಿಕಾರಿಗಳು ಮರು ಸರ್ವೇಮಾಡಿಸಿ, ಅರಣ್ಯ ಇಲಾಖೆಯ ಬೊಟಾನಿಕಲ್​ ಗಾರ್ಡನ್​ಗೆ ಹಾಗೂ ಇತರ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟಿರುವ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಬೇಲಿ ನಿರ್ಮಿಸಿ, ಸರ್ಕಾರಿ ಜಾಗ ಎಂಬ ಫಲಕ ಅಳವಡಿಸದಿದ್ದರೆ ಮುಂದಿನ ದಿನಗಳಲ್ಲಿ ಜಾಗ ಬಲಾಢ್ಯರ ಪಾಲಾಗುವ ಸಾಧ್ಯತೆ ಇದೆ.
- ಮಧು ಸ್ಥಳಿಯ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net