ಭೂರಹಿತ ಹೈನುಗಾರರಿಗೆ ಮೇವು ವಿತರಣೆ

* ಬರಗಾಲದಲ್ಲಿ ರೈತರಿಗೆ ಗ್ರಾಪಂ ನೆರವು
ಕುಂದಾಣದಲ್ಲಿ ಭೂರಹಿತ ರೈತರಿಗೆ ತಾಪಂ ಇಒ ಮುನಿರಾಜು ಮೇವು ವಿತರಿಸಿದರು. ಗ್ರಾಪಂ ಆಡಳಿತಾಧಿಕಾರಿ ಸುನಿಲ್​, ಹೈನುಗಾರರಾದ ನಾಗೇಶ್​, ಕಿರಣ್​ ಕುಮಾರ್​, ರಾಮಾಂಜಿನಪ್ಪ, ವಿಜಯಕುಮಾರ್​, ಚಂದ್ರಪ್ಪ, ಕೃಷ್ಣಪ್ಪ, ಕೆಂಪಣ್ಣ, ಬೈರೇಗೌಡ, ಕೆಂಪೇಗೌಡ, ರೈತರು ಇದ್ದರು.
ಕುಂದಾಣದಲ್ಲಿ ಭೂರಹಿತ ರೈತರಿಗೆ ತಾಪಂ ಇಒ ಮುನಿರಾಜು ಮೇವು ವಿತರಿಸಿದರು. ಗ್ರಾಪಂ ಆಡಳಿತಾಧಿಕಾರಿ ಸುನಿಲ್​, ಹೈನುಗಾರರಾದ ನಾಗೇಶ್​, ಕಿರಣ್​ ಕುಮಾರ್​, ರಾಮಾಂಜಿನಪ್ಪ, ವಿಜಯಕುಮಾರ್​, ಚಂದ್ರಪ್ಪ, ಕೃಷ್ಣಪ್ಪ, ಕೆಂಪಣ್ಣ, ಬೈರೇಗೌಡ, ಕೆಂಪೇಗೌಡ, ರೈತರು ಇದ್ದರು.
Published on: 

ಕುಂದಾಣ: ಬರಗಾಲದ ತೀವ್ರತೆಯಿಂದಾಗಿ ಗ್ರಾಮೀಣ ಭಾಗದ ರೈತರು ಮತ್ತು ಜಾನುವಾರುಗಳು ಎದುರಿಸುತ್ತಿರುವ ಮೇವಿನ ಅಭಾವ ನೀಗಿಸುವ ನಿಟ್ಟಿನಲ್ಲಿ ಕುಂದಾಣ ಗ್ರಾಪಂ ಮಹತ್ವದ ಹೆಜ್ಜೆ ಇಟ್ಟಿದೆ. ಪಂಚಾಯತ್​ನಿಂದ ವಿಶೇಷವಾಗಿ ಜಾನುವಾರುಗಳಿಗಾಗಿ ಬೆಳೆಯಲಾಗಿದ್ದ ಹಸಿರು ಜೋಳದ ಮೇವನ್ನು, ಜಮೀನು ರಹಿತ ಹೈನುಗಾರಿಕೆ ರೈತರಿಗೆ ತಾಪಂ ಇಒ ಮುನಿರಾಜು ಅಧಿಕೃತವಾಗಿ ವಿತರಿಸಿದರು.

ಮೇವು ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಕುಂದಾಣದಲ್ಲಿ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ. ದೇವನಹಳ್ಳಿ ತಾಲೂಕಿನ ಕನ್ನಮಂಗಲ, ಜಾಲಿಗೆ, ವಿಶ್ವನಾಥಪುರ, ಹಾರೋಹಳ್ಳಿ ಮತ್ತಿತರ ಗ್ರಾಪಂಗಳಲ್ಲಿ ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆ ಮೇರೆಗೆ ಒಟ್ಟು 60 ಎಕರೆಯಲ್ಲಿ ಮೇವು ಬೆಳೆಯಲಾಗಿದೆ.

ಈ ಪೈಕಿ 38 ಎಕರೆ ಸಲು ಬಂದಿದ್ದು, ಇದರಲ್ಲಿ 3 ಎಕರೆಯಷ್ಟು ಮೇವು ಕಟಾವು ಮಾಡಿ 38 ರೈತರಿಗೆ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಒಟ್ಟು ನಾಲ್ಕು ಟನ್​ ಮೇವು ಸಂಗ್ರಹವಾಗಿದ್ದು, ಹಂತ ಹಂತವಾಗಿ ರೈತರಿಗೆ ಮಾನದಂಡಗಳ ಮೂಲಕ ಹಂಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಬರಗಾಲದ ಛಾಯೆ ಆವರಿಸಿದೆ. ಕೃಷಿಯ ಜತೆಗೆ ಹೈನುಗಾರಿಕೆ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕಿವೆ. ಸ್ವಂತ ಜಮೀನು ಹೊಂದಿರುವ ರೈತರು ಹೇಗೋ ಜಮೀನುಗಳಲ್ಲಿ ಅಲ್ಪಸ್ವಲ್ಪ ಮೇವು ಬೆಳೆದುಕೊಳ್ಳುತ್ತಾರೆ. ಆದರೆ, ಭೂಮಿ ಇಲ್ಲದ ಹೈನುಗಾರರು ಜಾನುವಾರುಗಳಿಗೆ ಮೇವು ಹೊಂದಿಸಲು ಪರದಾಡುವಂತಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಜಾನುವಾರುಗಳ ರಕ್ಷಣೆ ಮಾಡುವುದು ಮತ್ತು ರೈತರ ಆರ್ಥಿಕ ಬೆನ್ನೆಲುಬಾಗಿರುವ ಹೈನುಗಾರಿಕೆಯನ್ನು ಉಳಿಸಿಕೊಳ್ಳುವುದು ಆಡಳಿತ ಯಂತ್ರದ ಪ್ರಮುಖ ಜವಾಬ್ದಾರಿ ಎಂದು ತಾಪಂ ಇಒ ಹೇಳಿದರು.