

ದೊಡ್ಡಬಳ್ಳಾಪುರ: ಲೇಖಕ ರವಿ ಹಂಜ್ ಬರೆದಿರುವ "ಬಸವ ಮಂಟಪ' ಕೃತಿಯಲ್ಲಿ ವಿಶ್ವಗುರು ಬಸವಣ್ಣನ ಕುರಿತು ಅವಹೇಳನ ಮಾಡಲಾಗಿದೆ. ಇದನ್ನು ವೀರಶೈವ ಲಿಂಗಾಯತ ಸಮುದಾಯದಿಂದ ಖಂಡಿಸುತ್ತಿದ್ದೇವೆ. ಕೃತಿಯ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಮುಖಂಡ ಪುಟ್ಟಬಸವರಾಜು ತಿಳಿಸಿದರು.
ನಗರದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ್ ಬಿದರಿ ಸಮ್ಮುಖದಲ್ಲಿ ಈ ಕೃತಿ ಬಿಡುಗಡೆಯಾಗಿರುವುದು ವಿಪರ್ಯಾಸ. ಒಂದು ಸಮಾಜದ ವಿರುದ್ಧ ಮತ್ತೊಂದು ಸಮಾಜವನ್ನು ಎತ್ತಿಕಟ್ಟಲಾಗುತ್ತಿದೆ. ಇಂತಹ ಘಟನೆಯನ್ನು ತಡೆಯಲೇಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತವೆ. ಕೃತಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.