

ದೊಡ್ಡಬಳ್ಳಾಪುರ : ಅಂಬೇಡ್ಕರ್ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಕಾಲೀನ ಆಶೋತ್ತರಗಳಿಗೆ ಧ್ವನಿಯಾಗುವುದು ಅಗತ್ಯ ಎಂದು ತೂಬಗೆರೆ ಸರ್ಕಾರಿ ಕಾಲೇಜು ಉಪನ್ಯಾಸಕ ಎನ್.ಮಹೇಶ್ ಹೇಳಿದರು.
ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಮತ್ತು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಓದು, ಬದುಕು ಮತ್ತು ಸಾಧನೆಗಳ ಪರಿಚಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ,ಅಸ್ಪ--ೃಶ್ಯತೆಯ ವಿರುದ್ಧ ಧ್ವನಿಯೆತ್ತಿದ ಅವರ ಹೋರಾಟದ ಬದುಕು ಅನನ್ಯವಾದದ್ದು. ಈ ದೇಶದ ಎಲ್ಲ ವರ್ಗಗಳಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿರುವ ಅಂಬೇಡ್ಕರ್, ಶೋಷಿತ ಸಮುದಾಯಗಳಿಗೆ ದನಿಯಾದವರು. ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಸಂವಿಧಾನದ ಮೂಲಕ ದೇಶಕ್ಕೆ ಸುಭದ್ರ ಅಡಿಪಾಯವನ್ನು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಅಂಬೇಡ್ಕರ್ ಅವರು ಈ ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿಗಳಲ್ಲಿ ಒಬ್ಬರು. ಅವರ ಉದಾತ್ತ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ. ಹಣ ಹಾಗೂ ಜಾತಿ ಕೇಂದ್ರಿತ ವ್ಯವಸ್ಥೆ ದೇಶದ ಭವಿಷ್ಯದ ದೃಷ್ಟಿಯಲ್ಲಿ ಹೆಚ್ಚು ಅಪಾಯಕಾರಿ. ಇಂತಹ ವ್ಯವಸ್ಥೆಯನ್ನು ನಿಗ್ರಹಿಸುವುದು ಅಂಬೇಡ್ಕರ್ ವಾದದ ಪ್ರಮುಖ ಅಂಶಗಳಲ್ಲಿ ಒಂದು ಎಂದರು.
ಪ್ರಾಂಶುಪಾಲ ಡಾ.ಜಿ.ಮುರಳಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನಾದರ್ಶಗಳನ್ನು ತಿಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್,ಅಂಬೇಡ್ಕರ್ ಮತ್ತು ಮಹಾತ್ಮಗಾಂಧೀಜಿ ಅವರ ಚಿಂತನೆಗಳ ಸಾಕಾರ ದೇಶದ ಸದೃಢ ಭವಿಷ್ಯಕ್ಕೆ ಅಡಿಪಾಯವಾಗಿದೆ. ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಶೋಷಿತ ಸಮುದಾಯಗಳ ಅಭ್ಯುದಯದ ಆಶಯಗಳಿಗೆ ಪೂರಕವಾಗಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. 20ನೇ ಶತಮಾನದ ಶ್ರೇಷ್ಠ ತತ್ವಜ್ಞಾನಿ, ಆರ್ಥಿಕ ತಜ್ಞ, ರಾಜಕೀಯ-, ಸಾಮಾಜಿಕ ಚಿಂತಕರೆನಿಸಿದ ಅವರ ಬದುಕಿನ ಅಧ್ಯಯನ ಹೊಸ ಒಳನೋಟಗಳನ್ನು ನೀಡುತ್ತದೆ ಎಂದರು.
ಬಹುಮಾನ ವಿತರಣೆ: ಇದೇ ವೇಳೆ ಡಾ.ಅಂಬೇಡ್ಕರ್ ಬದುಕು -ಸಾಧನೆಗಳ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಡಿ.ಆರ್.ನಿಶಾ(ಪ್ರಥಮ), ಜಿ.ಹುಸೇನ್(ದ್ವೀತಿಯ), ಕೆ.ಪಲ್ಲವಿ(ತೃತೀಯ), ಎಂ.ಎನ್.ನಯನ, ಎನ್.ಎಲ್.ಗಿರೀಶ್(ಸಮಾಧಾನಕರ) ಬಹುಮಾನಗಳನ್ನು ಪಡೆದರು.