ಗಟ್ಟೀಪುರದಲ್ಲೂ ಚಿರತೆ ಆತಂಕ

ಕಾಡುಪ್ರಾಣಿಯ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆ ಪಟಾಕಿ ಸಿಡಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಗಟ್ಟೀಪುರದಲ್ಲೂ ಚಿರತೆ ಆತಂಕ
Desk
Published on: 

ಮಾಗಡಿ: ಕಲ್ಲುದೇವನಹಳ್ಳಿಯ ಜಮೀನಿನಲ್ಲಿ ಸೋಮವಾರ ಹೂ ಬಿಡಿಸುತ್ತಿದ್ದ ರೈತ ಶಿವಸ್ವಾಮಿ ಅವರನ್ನು ಚಿರತೆ ಬಲಿ ಪಡೆದಿರುವ ಬೆನ್ನಲ್ಲೇ, ದಾಳಿಯಾದ ಸ್ಥಳದಿಂದ ಕೇವಲ 3 ಕಿ, ಮೀ ದೂರದ ಗಟ್ಟೀಪುರ ಬಳಿ ಮರುದಿನ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿರುವುದು ಆತಂಕ ಹೆಚ್ಚಿಸಿದೆ.

ಗಟ್ಟೀಪುರದ ವೀರಪ್ಪಾಜಿ ಅವರ ತೋಟದ ಅಕ್ಕಪಕ್ಕದಲ್ಲಿ ಚಿರತೆ ಓಡಾಡಿದ್ದು, ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಚಿರತೆಯನ್ನು ಕೂಡಲೇ ಸೆರೆಹಿಡಿಯುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ ಸೆರೆ ಹಿಡಿಯಲು ಒತ್ತಾಯಿಸಿದ್ದರೂ, ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಚಿರತೆಯ ದೃಶ್ಯಗಳು ಸೆರೆಯಾದ ಬಳಿಕ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಚಿರತೆ ಸೆರೆಹಿಡಿಯಲು ಬೋನು ಅಳವಡಿಸಿದ್ದಾರೆ.

ಅರಣ್ಯ ಇಲಾಖೆ ಮೂರು ವಿಶೇಷ ತಂಡ ನಿಯೋಜಿಸಿ ಡ್ರೋನ್ ಕ್ಯಾಮರಾ ಬಳಸಿ ಚಿರತೆಯ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿದ್ದು, ಅಗತ್ಯವಿರುವ ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ಈ ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಚಿರತೆ ಸೆರೆ ಹಿಡಿಯಲು ಎಲ್ಲ ಕ್ರಮಕೈಗೊಳ್ಳಲಾಗಿದೆ. ಅದೇ ರೀತಿ ಗಟ್ಟಿಪುರದಲ್ಲೂ ರಾತ್ರಿ, ಹಗಲು ಎನ್ನದೆ 24 ಗಂಟೆ ಕಾರ್ಯಚರಣೆ ಮುಂದುವರಿದಿದೆ, ಗ್ರಾಮದ ಜನರಿಗೆ ಅರಿವು ಮೂಡಿಸಿ, ಪಟಾಕಿಗಳನ್ನು ಸಿಡಿಸಲಾಗುತ್ತಿದೆ. ಶೀಘ್ರದಲ್ಲೇ ಚಿರತೆ ಸೆರೆಹಿಡಿಯಲಾಗುವುದು.

ನೇತ್ರಾವತಿ, ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net