ಆಧಾರ್​ನಲ್ಲಿ ಆಪ್ಡೇಟ್​ ಆಗದ ಬೆಂ.ದಕ್ಷಿಣ ಜಿಲ್ಲೆ ಹೆಸರು?

ಆಧಾರ್
ಆಧಾರ್
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ಆಧಾರ್​ ಮಾಡಿಸಲು ಆಗುತ್ತಿಲ್ಲ
  • ಹಳೆಯದು ಅಪ್ಡೇಟ್​ ಇಲ್ಲ
  • ಸಾರ್ವಜನಿಕರಿಗೆ ಕಿರಿಕಿರಿ
ರಾಮನಗರ
ಜಿಲ್ಲೆಯಾಗಿ 19 ವರ್ಷ ಪೂರೈಸಿರುವ ರಾಮನಗರದ ಹೆಸರು ಬೆಂಗಳೂರು ದಕ್ಷಿಣವಾಗಿ ವರ್ಷ ಕಳೆದಿದೆ.
ಆದರೆ, ತಾಂತ್ರಿಕ ಸಮಸ್ಯೆಯಿಂದ ಇನ್ನೂ ಹೆಸರು ಬದಲಾವಣೆ ಗೊಂದಲೇ ಮುಂದುವರಿದಿದ್ದು, ಇದರಿಂದಾಗಿ ಸಾರ್ವಜನಿಕರು ತೊಂದರೆಪಡುವಂತಾಗಿದೆ.
2007ರ ಆ.23ರಂದು ರಾಮನಗರ ಜಿಲ್ಲೆ ಉದಯಿಸಿತು. ಆದರೆ, ಮೊದಲಿನಿಂದಲೂ ಈ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಡಿ.ಕೆ.ಶಿವಕುಮಾರ್​ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಿದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಕ್ಕಿರಲಿಲ್ಲ. ಆದರೂ ಪಟ್ಟು ಬಿಡದ ಡಿ.ಕೆ.ಶಿವಕುಮಾರ್​ ತಮ್ಮ ಹಠ ಸಾಧಿಸಿಯೇ ಬಿಟ್ಟರು. ಆದರೆ, ಈಗ ಆಧಾರ್​ ಮಾಡಿಸಲು ಹೋಗುವ ವ್ಯಕ್ತಿ ಜಿಲ್ಲೆಯ ಹೆಸರನ್ನು ರಾಮನಗರ ಬದಲು ಬೆಂಗಳೂರು ದಕ್ಷಿಣ ಎಂದು ಹಾಕಿಕೊಡಿ ಎಂದು ಕೇಳಿಕೊಂಡರೆ, ಆಧಾರ್​ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳದೇ ಕಳುಹಿಸಲಾಗುತ್ತಿದೆ.
ಆಧಾರ್​ ದೊರೆಯುತ್ತಿಲ್ಲ: ಜಿಲ್ಲೆಯ ಹೆಸರು ಮರು ನಾಮಕರಣಗೊಂಡ ನಂತರ ಎಲ್ಲ ದಾಖಲೆಗಳಲ್ಲೂ ಹೊಸ ಹೆಸರು ನಮೂದಿಸಬೇಕಿದೆ. ಈ ಸಂಬಂಧ ಆಧಾರ್​ ತಿದ್ದುಪಡಿಗೆ ಹೋದರೆ, ಇಲ್ಲಿ ಜಿಲ್ಲೆ ಹೆಸರು ಬದಲಾವಣೆ ಸಾಧ್ಯವಿಲ್ಲ. ನಮ್ಮ ತಂತ್ರಾಂಶದಲ್ಲಿ ಇನ್ನೂ ಹೆಸರು ಬದಲಾವಣೆ ಆಗಿಲ್ಲ ಎನ್ನುವ ಉತ್ತರ ಕೊಡುತ್ತಿದ್ದಾರೆ. ಹೊಸದಾಗಿ ಆಧಾರ್​ ಕಾರ್ಡ್​ ಮಾಡಿಸಲು ಹೋದರೆ ಈಗಲೂ ರಾಮನಗರ ಎಂದೇ ಬರುತ್ತಿದೆ. ಬೆಂಗಳೂರು ದಕ್ಷಿಣ ಬೇಕು ಎಂದು ಆಗುವುದಿಲ್ಲ ಎಂದು ಅರ್ಜಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇದೇ ಸಮಸ್ಯೆ ಪಾಸ್​ ಪೋರ್ಟ್​ ಮಾಡಿಸಲು ಹೋದಾಗಲೂ ಆಗುತ್ತಿದೆ ಎನ್ನುವುದು ಸಾರ್ವಜನಿಕರ ಅಳಲು.
ಸಮಸ್ಯೆಗೆ ಕಾರಣವೇನು?
ರಾಜ್ಯ ಸರ್ಕಾರ ಪಟ್ಟು ಹಿಡಿದು ಹೆಸರು ಬದಲಾವಣೆ ಮಾಡಿದೆ. ಆದರೆ, ಇದು ಡೇಟಾ ಬೇಸ್​ನಲ್ಲಿ ಈಗಲೂ ರಾಮನಗರ ಎಂದೇ ಇರುವ ಕಾರಣದಿಂದಾಗಿ ಆಧಾರ್​ ಸೇರಿ ಹಲವು ಇಲಾಖೆಗಳ ವೆಬ್​ಸೈಟ್​ಗಳಲ್ಲಿ ಸಮಸ್ಯೆ ಎದುರಾಗಿದೆ. ರಾಜ್ಯ ಸರ್ಕಾರ ಲೋಕಲ್​ ಗೌರ್ನಮೆಂಟ್​ ಡೈರಕ್ಟರಿ ಮತ್ತು ಯುಐಡಿಎಐ ಡೇಟಾ ಬೇಸ್​ನಲ್ಲಿ ಹೊಸ ಜಿಲ್ಲೆಯ ಹೆಸರು ಇನ್ನೂ ತಾಂತ್ರಿಕವಾಗಿ ಅಪ್​ಡೇಟ್​ ಆಗಬೇಕು. ಆದರೆ, ಒಂದು ವರ್ಷ ಕಳೆದರೂ ಈ ಪ್ರಕ್ರಿಯೆ ನಡೆದಿಲ್ಲ. ಹೆಸರು ಬದಲಾಯಿಸಿದ ನಂತರ ರಾಜ್ಯ ಸರ್ಕಾರ ಪಂಚಾಯತ್​ ರಾಜ್​ ಸಚಿವಾಲಯದ ಪೋರ್ಟಲ್​ನಲ್ಲಿ ಹೊಸ ಜಿಲ್ಲೆಯ ಕೋಡ್​ ಮತ್ತು ಗಡಿಗಳನ್ನು ಅಧಿಕೃತವಾಗಿ ಅಪ್​ಡೇಟ್​ ಮಾಡಬೇಕಿರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆಧಾರ್​ನಲ್ಲಿ ಹೊಸ ಹೆಸರು ಪ್ರತಿಫಲಿಸುವುದಿಲ್ಲ. ಇದರ ಜತೆಗೆ ಆಧಾರ್​ ವ್ಯವಸ್ಥೆಯು ರಾಜ್ಯದ ಕಂದಾಯ ಇಲಾಖೆ ಮತ್ತು ಯುಐಡಿಎಐ ಡೇಟಾವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಯುಐಡಿಎಐ ತಂತ್ರಾಂಶದಲ್ಲಿ ಬೆಂಗಳೂರು ದಣ ಸೇರ್ಪಡೆಯಾಗದ ಕಾರಣ, ಆಧಾರ್​ ಸೆಂಟರ್​ಗಳು ಅಸಹಾಯಕವಾಗಿದೆ.

ಸರ್ಕಾರ ಗಮನ ಹರಿಸಬೇಕಿದೆ

ರಾಜ್ಯ ಸರ್ಕಾರ ಹೆಸರು ಬದಲಾವಣೆ ಮಾಡಿದೆ, ಆದರೆ, ಇದಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕಿರಲಿಲ್ಲ. ಇದರ ಹೊರತಾಗಿಯೂ ನಡೆದು ಹೋಗಿರುವ ಹೆಸರು ಬದಲಾವಣೆ ಪ್ರಕ್ರಿಯೆಗೆ ಕೇಂದ್ರದ ಅಧಿಕೃತ ಮುದ್ರೆಯನ್ನು ಸರ್ಕಾರ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ಸಮನ್ವಯ ಸಾಧಿಸಿ, ರಾಜ್ಯ ಸರ್ಕಾರದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಿದೆ. ಇಲ್ಲವಾದರೆ ರಾಜ್ಯ ಮತ್ತು ಕೇಂದ್ರಗಳ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಸಾರ್ವಜನಿಕರಿಗೆ ತೊಂದರೆ ಆಗುವುದಂತೂ ಖಚಿತ.

ರಾಜ್ಯದ ವೆಬ್​ಸೈಟ್​ಗಳಲ್ಲೂ ಸಮಸ್ಯೆ

ಇದು ಕೇವಲ ಆಧಾರ್​ ಕಾರ್ಡ್​ ಪಡೆಯಲು ಉಂಟಾಗಿರುವ ಸಮಸ್ಯೆ ಮಾತ್ರವಲ್ಲದೆ, ರಾಜ್ಯದ ಹಲವು ಇಲಾಖೆಗಳ ವೆಬ್​ಸೈಟ್​ಗಳಲ್ಲಿ ಇನ್ನೂ ರಾಮನಗರ ಹೆಸರು ಬದಲಾಗಲೇ ಇಲ್ಲ. ಇತ್ತೀಚೆಗೆ ವಿವಿಧ ಇಲಾಖೆಗಳು ವಿವಿಧ ಹುದ್ಧೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್ಚಿನ ಇಲಾಖೆಗಳಲ್ಲಿ ಈಗಲೂ ಜಿಲ್ಲೆಯ ಡ್ರಾಪ್​ಡೌನ್​ಲ್ಲಿ ರಾಮನಗರ ಎಂದೇ ಬರುತ್ತಿದೆ. ಇದನ್ನು ಸರಿಪಡಿಸುವ ಕೆಲಸವೂ ಆಗಬೇಕಿದೆ.
ಸಮಸ್ಯೆ ನಮ್ಮದಲ್ಲ, ಡೇಟಾ ಬೇಸ್​ನಲ್ಲಿಯೇ ಇನ್ನೂ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಎಂದಾಗಿಲ್ಲ. ಇದರಿಂದಾಗಿ ಸಮಸ್ಯೆ ಆಗುತ್ತಿದೆ. ಇದನ್ನು ಸರ್ಕಾರ ಸರಿಪಡಿಸಬೇಕು. ಆಧಾರ್​ ಮಾತ್ರವಲ್ಲ, ರಾಜ್ಯದ ಹಲವಾರು ಇಲಾಖೆಗಳಿಗೆ ಅರ್ಜಿ ಹಾಕುವ ವೆಬ್​ಸೈಟ್​ಗಳಲ್ಲೂ ಇನ್ನೂ ಹೆಸರು ಬದಲಾವಣೆ ಆಗಿಲ್ಲ.
> ಭೈರೇಗೌಡ, ಸೈಬರ್​ ಕೇಂದ್ರದ ಮಾಲೀಕರು, ರಾಮನಗರ
ಜಿಲ್ಲೆ ಮರುನಾಮಕರಣಗೊಂಡು ಒಂದು ವರ್ಷ ಕಳೆದರೂ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಆಗದ ಕಾರಣ ಆಧಾರ್​ ಮತ್ತು ಪಾಸ್​ ಪೋರ್ಟ್​ನಲ್ಲಿ ಈಗಲೂ ರಾಮನಗರ ಎಂದೇ ಬರುತ್ತಿದೆ. ಆಧಾರ್​ ತಿದ್ದುಪಡಿ, ಹೊಸ ಆಧಾರ್​ ಮಾಡಿಸಲು ಆಗುತ್ತಿಲ್ಲ. ಇದರಿಂದಾಗುತ್ತಿರುವ ಸಮಸ್ಯೆಗೆ ಕೂಡಲೇ ಪರಿಹಾರ ಕೊಡಿಸಿ.
> ಕೆ.ಎಸ್​.ಚಂದ್ರೇಗೌಡ, ಚನ್ನಪಟ್ಟಣ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net