ರಾಜಕೀಯ ನಾಯಕರ ವಾಕ್ಸಮರ

ಗರಿಗೆದರಿದ ಜಿಪಂ, ತಾಪಂ ಚುನಾವಣೆ - ತಾರಕಕ್ಕೇರಿದ ಆರೋಪ-ಪ್ರತ್ಯಾರೋಪ
War of Words Among Political Leaders
ಮಂಡ್ಯ ಜಿಲ್ಲಾ ಪಂಚಾಯಿತಿ ಆಡಳಿತ.War of Words Among Political Leaders
Published on: 

ಚನ್ನಪಟ್ಟಣ: ಕಳೆದ ಉಪಚುನಾವಣೆ ಬಳಿಕ ಕ್ಷೇತ್ರದಲ್ಲಿ ತುಸು ತಣ್ಣಗಾಗಿದ್ದ ರಾಜಕೀಯ ವಾತಾವರಣ ಇದೀಗ ಮತ್ತೆ ಕಾವೇರತೊಡಗಿದೆ. ಜಿಪಂ ಹಾಗೂ ತಾಪಂ ಚುನಾವಣೆಗಳ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರ ಮತ್ತೆ ಆರಂಭಗೊಂಡಿದೆ.

ಹೌದು...ರಾಜಕಾರಣವನ್ನೇ ಉಸಿರಾಡುವ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಚನ್ನಪಟ್ಟಣದಲ್ಲಿ ಚುನಾವಣೆ ಎಂದರೆ ಕೇವಲ ಮತಗಳ ಲೆಕ್ಕಾಚಾರವಲ್ಲ. ಅದು ನಾಯಕರ ಪ್ರತಿಷ್ಠೆ, ಪಕ್ಷಗಳ ಅಸ್ತಿತ್ವ ಹಾಗೂ ಕಾರ್ಯಕರ್ತರ ಬಲಾಬಲ ಪ್ರದರ್ಶನದ ಅಖಾಡವೂ ಹೌದು. ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದವು. ಚುನಾವಣೆಯ ಫಲಿತಾಂಶದ ಬಳಿಕ ರಾಜಕೀಯ ನಾಯಕರ ಮಾತಿನ ಸಮರ ಕೊಂಚ ತಣ್ಣಗಾಗಿತ್ತು. ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ರಾಜಕೀಯ ಕಣ ರಂಗೇರಿದೆ.

ಪುಂಗಿದಾಸ, ಗೊಡ್ಡುಹಸು ಪದ ಬಳಕೆ!: ಇತ್ತೀಚೆಗೆ ಕಾಂಗ್ರೆಸ್ ವತಿಯಿಂದ ಜಿಪಂ ಹಾಗೂ ತಾಪಂ ಚುನಾವಣೆ ಸಿದ್ಧತೆಗಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಗಳಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ರಾಜಕೀಯ ಎದುರಾಳಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಭಾಷಣಗಳಲ್ಲಿ ಕುಮಾರಸ್ವಾಮಿ ಅವರನ್ನು ಪುಂಗಿದಾಸ, ಗೊಡ್ಡುಹಸು ಸೇರಿ ವ್ಯಂಗ್ಯಭರಿತ ಪದಗಳಿಂದ ಟೀಕಿಸುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಕೇವಲ ರಾಜಕೀಯ ನೀತಿ, ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಚಾರಗಳಿಗೆ ಸೀಮಿತವಾಗದೆ ವೈಯಕ್ತಿಕ ಟೀಕೆಯ ಧಾಟಿಯಲ್ಲಿ ಮಾತುಗಳು ಹೊರಬರುತ್ತಿರುವುದು ಕ್ಷೇತ್ರದ ರಾಜಕೀಯ ವಾತಾವರಣ ಮತ್ತಷ್ಟು ಕಾವೇರುವಂತೆ ಮಾಡಿದೆ.

ಯೋಗೇಶ್ವರ್ ಅವರ ಈ ಮಾತುಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಪ್ರಯತ್ನವೇ ಅಥವಾ ಜೆಡಿಎಸ್ ನಾಯಕರನ್ನು ಕೆಣಕುವ ರಾಜಕೀಯ ತಂತ್ರವೇ ಎಂಬ ಚರ್ಚೆಯೂ ಆರಂಭವಾಗಿದೆ.

ಜೆಡಿಎಸ್ ಪಾಳೆಯದಿಂದ ತಿರುಗೇಟು!: ಶಾಸಕ ಯೋಗೇಶ್ವರ್ ಅವರ ಟೀಕೆಗಳಿಗೆ ಜೆಡಿಎಸ್ ಪಾಳೆಯ ಸುಮ್ಮನೆ ಕುಳಿತಿಲ್ಲ. ಅವರ ಹೇಳಿಕೆಗಳಿಗೆ ಪ್ರತಿಯಾಗಿ ಜೆಡಿಎಸ್ ನಾಯಕರು ತಿರುಗೇಟು ನೀಡಲು ಆರಂಭಿಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ. ಜಯಮುತ್ತು ಯೋಗೇಶ್ವರ್ ಅವರ ರಾಜಕೀಯ ನಡವಳಿಕೆ ಹಾಗೂ ಹೇಳಿಕೆಗಳನ್ನು ಪ್ರಶ್ನಿಸುವ ಮೂಲಕ ತಿರುಗೇಟು ನೀಡುತ್ತಿದ್ದಾರೆ. ಯೋಗೇಶ್ವರ್ ಅವರ ರಾಜಕೀಯ ನಡೆ ಮತ್ತು ಹಿಂದಿನ ನಿಲುವುಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಶಾಸಕರಿಗೆ ರಾಜಕೀಯವಾಗಿ ತಿರುಗೇಟು ನೀಡುವ ಪ್ರಯತ್ನವೂ ನಡೆಯುತ್ತಿದೆ.

ಮಿನಿ ವಾರ್‌ಗೆ ತಾಲೀಮು!: ವಿಧಾನಸಭೆ ಚುನಾವಣೆಯಂತೆ ದೊಡ್ಡ ಮಟ್ಟದ ಪ್ರಚಾರದ ಅಬ್ಬರ ಜಿಪಂ ಮತ್ತು ತಾಪಂ ಚುನಾವಣೆಗಳಲ್ಲಿ ಇಲ್ಲದಿದ್ದರೂ, ಗ್ರಾಮೀಣ ಭಾಗದಲ್ಲಿ ಪಕ್ಷಗಳ ಸಂಘಟನೆ, ಕಾರ್ಯಕರ್ತರ ಪ್ರಾಬಲ್ಯ ಹಾಗೂ ಸ್ಥಳೀಯ ನಾಯಕರ ಹಿಡಿತವನ್ನು ಅಳೆಯಲು ಈ ಚುನಾವಣೆ ಮಹತ್ವದ್ದಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಎರಡೂ ಪಕ್ಷಗಳು ಈಗಿನಿಂದಲೇ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಕಾಂಗ್ರೆಸ್ ಪರವಾಗಿ ಶಾಸಕ ಯೋಗೇಶ್ವರ್ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಮುಂದಾಗಿದ್ದರೆ, ಜೆಡಿಎಸ್ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಉಳಿಸಿಕೊಳ್ಳುವುದರ ಜತೆಗೆ ಗ್ರಾಮೀಣ ಭಾಗದಲ್ಲಿ ಪಕ್ಷದ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ.

ಈ ನಡುವೆ ನಾಯಕರ ನಡುವಿನ ವಾಕ್ಸಮರ ಕಾರ್ಯಕರ್ತರ ಮಟ್ಟಕ್ಕೂ ವಿಸ್ತರಿಸುವ ಲಕ್ಷಣಗಳು ಕಾಣಿಸುತ್ತಿವೆ. ಒಬ್ಬರ ಹೇಳಿಕೆಗೆ ಮತ್ತೊಬ್ಬರು ಪ್ರತಿಕ್ರಿಯಿಸುವ ರಾಜಕೀಯ ಬೆಳವಣಿಗೆಗಳು ಸ್ಥಳೀಯ ಚುನಾವಣೆಯ ಪ್ರಚಾರದ ಭಾಗವಾಗುವ ಸಾಧ್ಯತೆಯಿದೆ.

ಅಭಿವೃದ್ಧಿ ವಿಚಾರಕ್ಕಿಂತ ವ್ಯಕ್ತಿಗತ ಟೀಕೆಯೇ ಮುನ್ನೆಲೆಗೆ?: ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಸಾರಿಗೆ, ಉದ್ಯೋಗ, ರೈತರ ಸಮಸ್ಯೆ ಸೇರಿ ಹಲವು ಜನಪರ ವಿಚಾರಗಳಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ನಿಲುವು ಹಾಗೂ ಸಾಧನೆಗಳನ್ನು ಜನರ ಮುಂದಿಡಬೇಕಿದೆ. ಆದರೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರಗಳಿಗಿಂತ ನಾಯಕರ ನಡುವಿನ ವೈಯಕ್ತಿಕ ಟೀಕೆಗಳೇ ಹೆಚ್ಚು ಸದ್ದು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಒಟ್ಟಾರೆ, ಕಳೆದ ಉಪಚುನಾವಣೆಯ ಬಳಿಕ ಮೌನಕ್ಕೆ ಶರಣಾಗಿದ್ದ ಚನ್ನಪಟ್ಟಣದ ರಾಜಕೀಯ ಅಖಾಡ ಮತ್ತೆ ಸದ್ದು ಮಾಡಲಾರಂಭಿಸಿದೆ. ಯೋಗೇಶ್ವರ್ ಅವರ ವಾಗ್ದಾಳಿಗೆ ಜೆಡಿಎಸ್ ನೀಡುತ್ತಿರುವ ತಿರುಗೇಟು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಜಿಪಂ ಮತ್ತು ತಾಪಂ ಚುನಾವಣೆಯ ಕಣದಲ್ಲಿ ಈ ವಾಕ್ಸಮರ ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಅಥವಾ ನಾಯಕರ ನಡುವಿನ ಪ್ರತಿಷ್ಠೆಯ ಕಾಳಗವಾಗಿಯೇ ಉಳಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.