

- ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಪ್ರಪ್ರಥಮ ಬಾರಿಗೆ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಮಿಶ್ರತಳಿ (ಹಳದಿ) ರೇಷ್ಮೆ ಗೂಡು ಕೆಜಿಗೆ 900 ರೂಪಾಯಿಗಳ ಗಡಿ ಸಮೀಪಿಸುತ್ತಿದ್ದು, ಮಿಶ್ರತಳಿ ರೇಷ್ಮೆಗೆ ದರ ಸಿಗುತ್ತಿಲ್ಲ ಎಂಬ ಕೊರಗಿನಲ್ಲಿದ್ದ ರೇಷ್ಮೆ ಬೆಳೆಗಾರರಲ್ಲಿ ಹರ್ಷ ತರಿಸಿದೆ.
ಏಷ್ಯಾಖಂಡದಲ್ಲೇ ರಾಮನಗರ ರೇಷ್ಮೆ ಮಾರುಕಟ್ಟೆ ಪ್ರಸಿದ್ಧಿ ಪಡೆದಿದ್ದು, ರಾಜ್ಯ ಹೊರರಾಜ್ಯಗಳಿಂದ ನಿತ್ಯ ನೂರಾರು ರೈತರು ಇಲ್ಲಿಗೆ ಬಂದು ರೇಷ್ಮೆ ಮಾರಾಟ ಮಾಡುತ್ತಾರೆ. ದ್ವಿತಳಿ (ಬಿಳಿಗೂಡು) ಕೂಡ ಸಾವಿರ ದಾಟಿದ್ದು, ಇದೀಗ ಮಿಶ್ರತಳಿ ರೇಷ್ಮೆ ಗೂಡು ಸಹ ಪೈಪೋಟಿಯಲ್ಲಿ ಸಾಗುತ್ತಿದೆ. ಕಳೆದ ವರ್ಷ 500ರಿಂದ 550 ಆಸುಪಾಸಿನಲ್ಲಿದ್ದ ಮಿಶ್ರತಳಿ ರೇಷ್ಮೆ ಈ ವರ್ಷದ ಪ್ರಾರಂಭದಿಂದಲೂ 650ರಿಂದ ಏರಿಕೆ ಕಂಡು ಇದೀಗ 900ರೂ. ಗೆ ಬಂದು ತಲುಪಿದೆ. ಶ್ರೀದಲ್ಲೇ ಸಾವಿರ ಗಡಿ ದಾಟುವ ನಿರೀೆ ಇದ್ದು, ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದಲ್ಲಿ ರೇಷ್ಮೆ ಗೂಡು ಹರಾಜಾಗುತ್ತಿದೆ ಎನ್ನುತ್ತಾರೆ ರೇಷ್ಮೆ ಅಧಿಕಾರಿಗಳು.
ರಾಜ್ಯದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಗಳಲ್ಲಿ ಶೇ.95 ರೈತರು ಮಿಶ್ರತಳಿ ರೇಷ್ಮೆ ಬೆಳೆಯುವುದರಿಂದ ಇವು ರೇಷ್ಮೆ ಬೆಳೆಯುವ ಸಾಂಪ್ರದಾಯಿಕ ಜಿಲ್ಲೆಗಳಾಗಿ ಗುರುತಿಸಿಕೊಂಡಿವೆ. ಇನ್ನು ರೇಷ್ಮೆಯಲ್ಲೇ ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ಬೆಲೆ ಏರಿಕೆ ವರದಾನವಾಗಿದೆ ಎನ್ನುತ್ತಾರೆ ಹೊಸದೊಡ್ಡಿ ರೇಷ್ಮೆ ಬೆಳೆಗಾರ ರಾವೇಂದ್ರ.
ಮಿಶ್ರತಳಿ ರೇಷ್ಮೆ ಲಾಭದಾಯಕ: ಮಿಶ್ರತಳಿ ರೇಷ್ಮೆ ರೋಗ ನಿರೋಧಕಶಕ್ತಿ ಹೊಂದಿದ್ದು, ಖರ್ಚು ಕಡಿಮೆ. ಜತೆಗೆ ಜಿಲ್ಲೆಯಲ್ಲಿ ಬಹಳಷ್ಟು ರೈತರು ತೆಂಗಿನ ತೋಟದಲ್ಲಿ ರೇಷ್ಮೆ ತೋಟ ನಿರ್ವಹಣೆ ಮಾಡಿದ್ದಾರೆ. ಈ ಹಿಂದಿನಿಂದಲೂ ಇವರು ಮಿಶ್ರತಳಿ ರೇಷ್ಮೆ ಬೆಳೆಯುತ್ತಿರುವುದರಿಂದ ಒಂದೇ ಜಮೀನಿನಲ್ಲಿ 2 ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬಹುದು ಎನ್ನುತ್ತಾರೆ ನುರಿತ ರೇಷ್ಮೆ ಬೆಳೆಗಾರರು.
ಆಧುನಿಕ ತಂತ್ರಜ್ಞಾನ: ಇತ್ತೀಚಿನ ದಿನಗಳಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಆಟೋ ಮೆಟಿಕ್ ರೀಲಿಂಗ್ ಮೆಷಿನ್ ಬಳಕೆ ಹೆಚ್ಚಾಗಿದೆ. 2,4,6 ಬೇಷನ್ ಚರಕದಲ್ಲಿ ನೂಲು ಬಿಚ್ಚಾಣಿಕೆ ಮಾಡುತ್ತಿರುವ ಕಾರಣ ವ್ಯಾಪಾರಿಗಳು ಹೆಚ್ಚಿನ ಗೂಡು ಖರೀದಿಸಲು ಸಾಧ್ಯವಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತಿದೆ. ಜತೆಗೆ ಇದರಲ್ಲಿ ಉತ್ಪತ್ತಿಯಾಗುವ ರೇಷ್ಮೆ ನೂಲನ್ನು ಹೆಚ್ಚಾಗಿ ಮೈಸೂರು ಸಿಲ್ಕ್ ಸೀರೆಗಳಿಗೆ ಬಳಸಲಾಗುತ್ತದೆ.
ಕಟ್ಟುನಿಟ್ಟಿನ ಕ್ರಮ: ಮಾರುಕಟ್ಟೆಯಲ್ಲಿ ರೈತರಿಗೆ ನೇರವಾಗಿ ಗೂಡಿನ ಮೌಲ್ಯಕ್ಕೆ ತಕ್ಕಂತೆ ದರ ಸಿಗುವಂತೆ ಇ&ಪೆಮೆಂಟ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಸಿಸಿಟಿವಿ ಅಳವಡಿಕೆ, ರೇಷ್ಮೆ ಬೆಳೆಗಾರರಿಗೆ ಆಗುತ್ತಿದ್ದ ಸಮಸ್ಯೆಗಳಿಗೆ ಕಡಿವಾಣ ಹಾಕಿದ ಕಾರಣ ರೈತರಿಗೆ ಮಿಶ್ರತಳಿ ಮತ್ತು ದ್ವಿತಳಿ ರೇಷ್ಮೆಗೆ ಹೆಚ್ಚಿನ ಬೆಲೆ ಸಿಗುತ್ತಿದೆ.
ಗೂಡು ಕಡಿಮೆ: ನಿತ್ಯ ರೇಷ್ಮೆ ಮಾರುಕಟ್ಟೆಗೆ ಮಿಶ್ರತಳಿ ರೇಷ್ಮೆ 9ರಿಂದ 13 ಟನ್ ಬರುತ್ತಿದೆ. ಹಿಂದೆ ಇದೇ ಗೂಡು 20ರಿಂದ 25 ಟನ್ ಆವಕ ಬರುತ್ತಿತ್ತು. ಪ್ರಸ್ತುತ ದ್ವಿತಳಿ 16ರಿಂದ 18 ಮೆಟ್ರಿಕ್ ಟನ್ ಬರುತ್ತಿದೆ. ಮಿಶ್ರತಳಿ ರೇಷ್ಮೆ ಬೆಳೆಯುವ ರೈತರ ಸಂಖ್ಯೆ ಇಳಿಮುಖವಾಗುತ್ತಿರುವ ಕಾರಣ ಮಿಶ್ರತಳಿ ರೇಷ್ಮೆ ಗೂಡು ಉತ್ಪಾದನೆ ಕುಂಠಿತವಾಗಿದೆ.
ಮಿಶ್ರತಳಿ ಉಳಿಯಬೇಕು: ಇತ್ತೀಚೆಗೆ ರೈತರು ಬಿಳಿಗೂಡಿನತ್ತ ವಾಲುತ್ತಿದ್ದಾರೆ. ಆದರೆ ಕುಣಿಗಲ್ ಮತ್ತು ಮಾಗಡಿ ಪ್ರದೇಶದಲ್ಲಿ ಮೈಸೂರು ತಳಿ ಬಿತ್ತನೆ ರೇಷ್ಮೆ ಬೆಳೆಯಲಾಗುತ್ತದೆ. ಹಾಗೆಯೇ ಸಿಎಸ್ಆರ್ 2 ಬಿತ್ತನೆ ಗೂಡು ಬೆಳೆಯುವ ಆನೇಕಲ್, ಕೆ.ಆರ್.ಪೇಟೆ, ಹಾಸನ ಮತ್ತು ಶಿರಸಿಗಳಲ್ಲಿ ಗಂಡು ಚಿಟ್ಟೆ ಉತ್ಪಾದನೆಯಾಗುವ ರೇಷ್ಮೆ ಬೆಳೆಯಲಾಗುತ್ತದೆ.
-------------------
ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ವ್ಯಾಪಾರಿಗಳು ರೈತರ ಮಧ್ಯೆ ಉತ್ತಮ ವಾತಾವರಣ ನಿರ್ಮಿಸಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದಿನಿಂದಲೂ ರೈತರಿಗೆ ಮಿಶ್ರತಳಿ ಮತ್ತು ದ್ವಿತಳಿಗೆ ಉತ್ತಮ ದರ ಸಿಗುತ್ತಿದೆ. ಇತ್ತೀಚೆಗೆ ಮಿಶ್ರತಳಿ ರೇಷ್ಮೆ ದರ 900 ರೂ. ಗಡಿ ದಾಟುತ್ತಿದ್ದು, ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. > ಕೈಲಾಸಮೂರ್ತಿ, ರೇಷ್ಮೆ ಜಂಟಿ ನಿರ್ದೇಶಕ, ರೇಷ್ಮೆ ಮಾರುಕಟ್ಟೆ, ರಾಮನಗರ
ಮಿಶ್ರತಳಿ ರೇಷ್ಮೆ ಗೂಡು 2, 4, 6 ಬೇಷನ್ ಫಿಲೇಚರ್ಗಳಿಗೆ ಬೇಕೆ ಬೇಕು. ಮಾರುಕಟ್ಟೆಗೆ ಕೇವಲ ಕಡಿಮೆ ಪ್ರಮಾಣದ ಗೂಡು ಬರುತ್ತಿದೆ. ಇದರಿಂದ ಬೆಲೆ ಏರುತ್ತಿದೆ. ರೇಷ್ಮೆ ನೂಲು ತೆಗೆಯುವವರಿಗೆ ದರ ಏರಿಕೆ ಬಿಸಿ ಮುಟ್ಟುತ್ತಿದೆ. ರೇಷ್ಮೆ ನೂಲಿಗೆ ತಕ್ಕ ದರ ಸಿಗುತ್ತಿಲ್ಲ. ಇದರಿಂದ ಸಣ್ಣಪುಟ್ಟ ಫಿಲೇಚರ್ಗಳವರು ಅಂದಿನ ಜೀವನ ಸಾಗಲಿ, ಕೈಗೆ ಕೆಲಸ ಸಿಗಲಿ ಎಂದು ದುಪ್ಪಟ್ಟು ದರದಲ್ಲೇ ಖರೀದಿ ನಡೆಸಬೇಕಾದ ಸನ್ನಿವೇಶ ಇದೆ. ಹೆಚ್ಚೆಚ್ಚು ಮಿಶ್ರತಳಿ ರೇಷ್ಮೆ ಬೆಳೆಯುವಂತೆ ರೈತರಿಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಪೋತ್ಸಾಹಿಸಬೇಕು.
- ಫರ್ವಿಜ್ ಪಾಷಾ, ರಾಮನಗರ ರೀಲರ್ ವೆಲ್ ಫೇರ್ ಅಸೋಷಿಯೇಷನ್ ಅಧ್ಯಕ್ಷ