ಚಿರತೆ ದಾಳಿಗೆ ರೈತ ಬಲಿ

*ಜಮೀನಿನಲ್ಲಿ ಹೂ ಬಿಡಿಸುತ್ತಿದ್ದಾಗ ಮೇಲೆರಗಿದ ನರಭಕ್ಷಕ *ಕಲ್ಲುದೇವನಹಳ್ಳಿಯಲ್ಲಿ ಆತಂಕದ ವಾತಾವರಣ
Leopard
ಚಿರತೆ ಸಂಗ್ರಹ ಚಿತ್ರ
Published on: 

ರಾಮನಗರ: ಮಾಗಡಿ ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಜಮೀನಿನಲ್ಲಿ ಕಾಕಡ ಹೂ ಬಿಡಿಸುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿ, ಸಾಯಿಸಿದೆ. ಕಲ್ಲುದೇವನಹಳ್ಳಿ ಮಲೆಮಾದೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ, ರೈತ ಶಿವಸ್ವಾಮಿ (62) ಮೃತ. ಗ್ರಾಮ ಸಮೀಪದ ತಮ್ಮ ಜಮೀನಿನಲ್ಲಿ ಹೂ ಬಿಡಿಸಲು ತೆರಳಿದ್ದಾಗ ಮೇಲೆರಗಿದ ಚಿರತೆ, ಕತ್ತಿನ ಎಡಭಾಗ, ಎಡಗೈ, ಎದೆ ಭಾಗಕ್ಕೆ ಕಚ್ಚಿದ್ದು, ತೀವ್ರ ರಕ್ತಸ್ರಾವವಾಗಿ ಜಮೀನಿನಲ್ಲೇ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ ಮತ್ತು ಐವರು ಸಹೋದರರು ಇದ್ದಾರೆ. ಲಯನ್ಸ್ ಐ ಬ್ಯಾಂಕ್‌ಗೆ ಮೃತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಅಧಿಕಾರಿಗಳ ವಿರುದ್ಧ ಜನಾಕ್ರೋಶ: ಸ್ಥಳಕ್ಕೆ ಆಗಮಿಸಿದ ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಟಿ.ನೇತ್ರಾವತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಉನ್ನತ ಮಟ್ಟದ ಅರಣ್ಯಾಧಿಕಾರಿಗಳು ಭೇಟಿ ನೀಡುವವರೆಗೆ ಮೃತದೇಹ ಎತ್ತಲು ಬಿಡುವುದಿಲ್ಲ ಎಂದು ಒಂದು ಗಂಟೆ ಕಾಲ ಗ್ರಾಮಸ್ಥರು ಪಟ್ಟುಹಿಡಿದರು. ಕೊನೆಗೆ ಮಾಜಿ ಶಾಸಕ ಎ.ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಅಶೋಕ್ ಗ್ರಾಮಸ್ಥರ ಮನವೊಲಿಸಿ ಚಿರತೆ ಸೆರೆ ಹಿಡಿಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

ಡಿಎಫ್ ಒ ರಾಮಕೃಷ್ಣಪ್ಪ ಮಾತನಾಡಿ, ಸಂಜೆಯಿಂದಲೇ ಡ್ರೋನ್ ಸಹಾಯದಿಂದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net