ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ?

* ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ * ಬಿಹಾರ ಮೂಲದ ವ್ಯಕ್ತಿಯಿಂದ ಕೃತ್ಯ * ಮಾತು ಬಾರದ ಮಗಳ ಮೇಲೆ ದೌರ್ಜನ್ಯ
dk - 2025-07-08T200739.019
ಸಂಗ್ರಹ ಚಿತ್ರ
Published on: 

ರಾಮನಗರ: ಮಾತು ಬಾರದ, ಕಿವಿ ಕೇಳದ 8 ವರ್ಷದ ಬಾಲಕಿಯ ಮೇಲೆ ತಂದೆಯೇ ಅತ್ಯಾಚಾರ ಎಸಗಿರುವುದು ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಬಿಹಾರ ಮೂಲದ ಉಮೇಶ್ ಕುಮಾರ್ ರಾಯ್ (30) ಆರೋಪಿ. ಎರಡು ತಿಂಗಳ ಹಿಂದೆ ಉದ್ಯೋಗ ಅರಸಿ ಪತ್ನಿ ಮತ್ತು ಮಕ್ಕಳೊಂದಿಗೆ ರಾಯ್ ಹಾರೋಹಳ್ಳಿಗೆ ಬಂದಿದ್ದ. ಮೊದಲ ಪತ್ನಿ ಅನಾರೋಗ್ಯದಿಂದಾಗಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಂಗವೈಕಲ್ಯವಿರುವ ಮಗುವಿನ ಆರೈಕೆಗಾಗಿ ಮತ್ತೊಂದು ಮದುವೆಯಾಗಿದ್ದ. ಎರಡನೇ ಪತ್ನಿಗೆ ಮೂವರು ಮಕ್ಕಳಿದ್ದಾರೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ರಾಯ್ ರಾತ್ರಿಪಾಳಿಯಲ್ಲಿ ಹಾಗೂ ಪತ್ನಿ ಹಗಲುಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ವಾರದ ಹಿಂದೆ ಮೊದಲ ಪುತ್ರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು ಎನ್ನಲಾಗಿದೆ.

ಆಸ್ಪತ್ರೆಯಲ್ಲಿ ಅನುಮಾನ:

ಬಾಲಕಿಯ ಸ್ಥಿತಿ ಗಮನಿಸಿದ ವೈದ್ಯರು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಘಟಕದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಖಚಿತಪಡಿಸಿದ್ದಾರೆ. ಬಳಿಕ ಸಂಜ್ಞೆ ಭಾಷೆ ಬಲ್ಲವರನ್ನು ಕರೆಸಿ ಮಗುವಿನಿಂದ ಮಾಹಿತಿ ಪಡೆದಿದ್ದಾರೆ. ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮರಾ ಗಮನಿಸಿದಾಗ ಅನುಮಾನಗೊಂಡ ಪೊಲೀಸರು ಆಕೆಯ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಪೋಕ್ಸೋ ಕಾಯ್ದೆಯಡಿ ರಾಯ್ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net