

ಬೆಂಗಳೂರು: ಪ್ರಸ್ತುತ ಪೀಳಿಗೆಯ ಅಗತ್ಯಗಳನ್ನು ಪೂರೈಸುವುದರ ಜತೆಗೆ ಭವಿಷ್ಯದ ಪೀಳಿಗೆಯ ಅಗತ್ಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಸಾಧಿಸುವುದು ದೇಶದ ಗುರಿಯಾಗಬೇಕು ಎಂದು ಬಿಎನ್‌ಎಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಝಾ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ಎಸ್‌ಎಬಿಎಸ್ ಹಾಗೂ ಎಇಟಿ ಸಮೂಹ ಸಂಸ್ಥೆಗಳು ಆಯೋಜಿಸಿದ್ದ ಪರಿಸರ ವ್ಯವಸ್ಥೆ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ 9ನೇ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ 2ನೇ ಭಾರತೀಯ ಪ್ರಾಣಿಶಾಸ್ತ್ರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಕಲ್ಯಾಣದ ನಡುವೆ ಸಮತೋಲನ ಸಾಧಿಸುವುದು ಅಗತ್ಯ. ಅರಣ್ಯ, ಜಲ, ಮಣ್ಣು ಹಾಗೂ ಜೀವವೈವಿಧ್ಯವನ್ನು ಸಂರಕ್ಷಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ದೀರ್ಘಕಾಲೀನ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಸುಸ್ಥಿರ ಅಭಿವೃದ್ಧಿಯ ಭಾಗವಾಗಿ ಪವನ ಮತ್ತು ಸೌರಶಕ್ತಿ, ಜೈವಿಕ ಅನಿಲ, ಸಣ್ಣ ಜಲವಿದ್ಯುತ್ ಯೋಜನೆಗಳು, ವಿದ್ಯುತ್ ವಾಹನಗಳು ಹಾಗೂ ಸುಸ್ಥಿರ ಕೃಷಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಸಮ್ಮೇಳನದಲ್ಲಿ ವಿವಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಬಿ.ಪಿ. ಹರಿಣಿ, ಎಇಟಿ ಸಂಸ್ಥೆಗಳ ನಿರ್ದೇಶಕ ಪ್ರೊ. ಪಿ. ಶಿವಜ್ಞಾನಮೂರ್ತಿ, ಇಥಿಯೋಪಿಯಾದ ಅಂಬೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪಿ. ನಟರಾಜನ್ ಸೇರಿ ಹಲವರು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆ ಮುಖ್ಯ: ಪ್ರೊ. ಶಿವರಾಜು
ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಜೀವವೈವಿಧ್ಯದ ರಕ್ಷಣೆ ಹಾಗೂ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಶಿವರಾಜು ತಿಳಿಸಿದರು.
ಪರಿಸರ ಸ್ನೇಹಿ ಅಭಿವೃದ್ಧಿಯ ಕುರಿತು ಶೈಕ್ಷಣಿಕ ಚರ್ಚೆಗಳು ಹಾಗೂ ಕಾರ್ಯಯೋಜನೆಗಳು ಸಮಾಜಕ್ಕೆ ಪರಿಣಾಮಕಾರಿ ಪರಿಹಾರಗಳನ್ನು ನೀಡುವಂತಿರಬೇಕು ಎಂದು ತಿಳಿಸಿದರು.