

ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಅರ್ಜಿದಾರರ ದಾಖಲೆಯ ನೈಜತೆ ಪರಿಶೀಲಿಸಿ ಬಗರ್ ಹುಕುಂ ತಂತ್ರಾಂಶದಲ್ಲಿ ಗಣಕೀಕರಣಕ್ಕೆ ಸಲ್ಲಿಕೆ ಮಾಡಬೇಕು. ಅರ್ಜಿಯ ನೈಜತೆಯಲ್ಲಿ ಅನುಮಾನ ಇದ್ದರೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ (ಆರ್ಸಿ) ಮತ್ತು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸೂಚನೆ ನೀಡಿದೆ.
ಬಗರ್ ಹುಕುಂಗೆ ಸಲ್ಲಿಕೆ ಆಗಿರುವ ನಮೂನೆ 50, 53 ಹಾಗೂ 57ರ ಭೌತಿಕ ಅರ್ಜಿಗಳು ನೈಜ ಆಗಿರುವುದರಿಂದ ಅವುಗಳನ್ನು ಗಣಕೀಕರಣಗೊಳಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಗಳು ಸ್ವೀಕೃತವಾಗಿವೆ. ಅಲ್ಲದೆ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿರುವ ಪ್ರಜಾಸೇವಾ ಇಲಾಖೆಯಡಿ ಸಾರ್ವಜನಿಕ ಕುಂದುಕೊರತೆ ಸಭೆಗಳಲ್ಲಿ ಸದರಿ ಬಾಕಿ ಅರ್ಜಿಗಳ ಕುರಿತಂತೆ ವ್ಯಾಪಕವಾಗಿ ಮನವಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಹಾಗೂ ಸರ್ಕಾರಿ ವ್ಯವಸ್ಥೆಯೊಳಗೆ ನಕಲಿ ಅಥವಾ ಅನಧಿಕೃತ ದಾಖಲೆಗಳು ದಾಖಲಾಗದಂತೆ ತಡೆಯಲು ರಾಜ್ಯಾದ್ಯಂತ ಕಟ್ಟುನಿಟ್ಟಾದ ಮತ್ತು ಸಾಂಸ್ಥಿಕ ಪರಿಶೀಲನಾ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ಎಸ್ ಎಲ್ ಗೆ ರವಾನೆ: ಅರ್ಜಿಯ ಭೌತಿಕ ಸ್ಥಿತಿ, ಅರ್ಜಿದಾರರ ಸಹಿ ಹಾಗೂ ಲಗತ್ತಿಸಲಾದ ಪೂರಕ ದಾಖಲೆಗಳನ್ನು ಕಂದಾಯ ಕಾಯ್ದೆಯ ಚೌಕಟ್ಟಿನಲ್ಲೇ ಮೌಲೀಕರಿಸಬೇಕು. ಅರ್ಜಿಯು ಈಗಾಗಲೇ ಬಗರ್ ಹುಕುಂ ಸಮಿತಿಯಲ್ಲಿ ತೀರ್ಮಾನವಾಗಿ ವಿಲೇ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಂಶಯಾಸ್ಪದ ಪ್ರಕರಣಗಳನ್ನು ಎಫ್ಎಸ್ ಎಲ್ ಗೆ ರವಾನಿಸಬೇಕು. ಅರ್ಜಿಯಲ್ಲಿನ ಸಹಿ, ಕೈಬರಹ ಅಥವಾ ರಿಜಿಸ್ಟರ್ ದಾಖಲೆಗಳ ನೈಜತೆ ಬಗ್ಗೆ ಸಂಶಯ ಅಥವಾ ತಿದ್ದುವಿಕೆಯ ಅನುಮಾನಗಳು ಕಂಡುಬಂದಲ್ಲಿ ವೈಜ್ಞಾನಿಕ ತನಿಖೆಗಾಗಿ ಪ್ರಾದೇಶಿಕ ಆಯುಕ್ತರು ಎಫ್ಎಸ್ಎಲ್ ಗೆ ರವಾನಿಸಿ ಅಂತಹ ಪ್ರಕರಣಗಳನ್ನು ತನಿಖೆ ಮುಗಿಯುವವರೆಗೆ ಬಾಕಿ ಇರಿಸಬೇಕೆಂದು ಕಟ್ಟಾಜ್ಞೆ ಮಾಡಲಾಗಿದೆ.
ಆದ್ದರಿಂದ, ಸ್ವೀಕೃತವಾದ ಭೌತಿಕ ಅರ್ಜಿಗಳನ್ನು ಗಣಕೀಕರಿಸಲು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿದೆ.
ಪ್ರಾದೇಶಿಕ ಆಯುಕ್ತರು ತಮ್ಮ ವ್ಯಾಪ್ತಿಯ ಅರ್ಜಿಗಳನ್ನು ಮಾತ್ರ ಪರಿಶೀಲಿಸಬೇಕು. ಸ್ವೀಕೃತವಾಗಿ ತಂತ್ರಾಂಶದಲ್ಲಿ ಗಣಕೀಕರಣಕ್ಕೆ ಬಾಕಿ ಇರುವ ಅರ್ಜಿಗಳನ್ನು ಮಾತ್ರ ಪರಿಶೀಲಿಸತಕ್ಕದ್ದು. ನಮೂನೆ-57ರ ಅರ್ಜಿಗಳನ್ನು ಪರಿಶೀಲನೆ ಹಾಗೂ ಗಣಕೀಕರಣ ಪ್ರಕ್ರಿಯೆಯಿಂದ ಕಡ್ಡಾಯವಾಗಿ ಹೊರಗಿಡಲಾಗಿದೆ ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.
ಪ್ರಾದೇಶಿಕ ಆಯುಕ್ತರು ಉಸ್ತುವಾರಿ ವಹಿಸಿ ಪರಿಶೀಲನಾ ತಂಡಗಳನ್ನು ರಚಿಸಬೇಕು. ಆ ತಂಡಗಳು ಜಿಲ್ಲೆಗಳಿಗೆ ಭೇಟಿ ನೀಡಿ ನಮೂನೆ-50 ಮತ್ತು 53ರ ಪ್ರತಿ ಅರ್ಜಿಯ ನೈಜತೆಯನ್ನು ಕಚೇರಿಯ ಮೂಲ ಅರ್ಜಿ ಸ್ವೀಕೃತಿ ರಿಜಿಸ್ಟರ್ಗಳೊಂದಿಗೆ ತಾಳೆ ನೋಡಬೇಕು. ಲಭ್ಯ ಇಲ್ಲದಿದ್ದರೆ ಅರ್ಜಿ ಸ್ವೀಕೃತಿ ರಿಜಿಸ್ಟರ್ ಆಧರಿಸಿ ಕ್ರಮವಹಿಸಬೇಕು. ರಿಜಿಸ್ಟರ್ನಲ್ಲಿ ತಿದ್ದುವಿಕೆ, ಹೊಸದಾಗಿ ಸೇರ್ಪಡೆ ಮಾಡಲಾದ ಅಂಶಗಳು ಅಥವಾ ಅಸ್ವಾಭಾವಿಕ ಬದಲಾವಣೆಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಆದೇಶಿಸಿದೆ.
ಡಿ.31 ಕೊನೇ ದಿನ: ಕ್ರೋಡೀಕೃತ ಅಂತಿಮ ವರದಿಯನ್ನು ಕಂದಾಯ ಆಯುಕ್ತರ ಮೂಲಕ ಸರ್ಕಾರಕ್ಕೆ ಸಲ್ಲಿಸಲು ಡಿಸೆಂಬರ್ 31ರವರೆಗೆ ಕಾಲಮಿತಿ ವಿಧಿಸಲಾಗಿದೆ. ವರದಿ ಸ್ವೀಕೃತವಾದ ನಂತರ, ಸರ್ಕಾರವು ಕೇವಲ ನೈಜ ಮತ್ತು ಅರ್ಹವೆಂದು ದೃಢಪಟ್ಟ ನಮೂನೆ-50 ಮತ್ತು ನಮೂನೆ 53 ರ ಅರ್ಜಿಗಳನ್ನು ಮಾತ್ರ ಬಗರ್ ಹುಕುಂ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಲು ಅನುಮತಿ ನೀಡಲಿದೆ.