

ಬೆಂಗಳೂರು: ನಗರದಲ್ಲಿ 2 ಕಡೆ ಸಂಭವಿಸಿದ್ದ ಅಪಘಾತದಲ್ಲಿ ಇಂಜಿನಿಯರ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ತುರ್ತಾಗಿ ಕೆಲಸಕ್ಕೆ ಹೊರಟಿದ್ದ ಆಂಬುಲೆನ್ಸ್ ನರ್ಸ್ ಬಾಯ್ ಬೈಕಿಗೆ ಯಾವುದೋ ವಾಹನ ಡಿಕ್ಕಿಯಾದ ಪರಿಣಾಮ ಕೇರಳ ಮೂಲದ ರಂಜಿತ್ (28) ಮೃತ ಪಟ್ಟಿದ್ದಾರೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿನ ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ರಂಜಿತ್, ಕೆಲ ವರ್ಷಗಳಿಂದ ನರ್ಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸ್ನೇಹಿತರ ಜತೆಗೆ ವಾಸವಾಗಿದ್ದ. ಗುರುವಾರ (ಅ.8ರಂದು) ಬೆಳಗಿನ ಜಾವ 3 ಗಂಟೆಗೆ ತುರ್ತು ಕರೆ ನಿಮಿತ್ತ ಎಚ್‌ಎಸ್‌ಆರ್ ಲೇಔಟ್‌ಗೆ ಹೊರಟಿದ್ದ ವೇಳೆ ಹೊಸೂರು ರಸ್ತೆಯ ಕೂಡ್ಲುಗೇಟ್ ಬಳಿ ಅಪಘಾತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಹುಳಿಮಾವು ಸಂಚಾರ ಪೊಲೀಸರು ಭೇಟಿ ನೀಡಿದ್ದು, ಮೃತನಿಗೆ ಯಾವ ವಾಹನ ಡಿಕ್ಕಿಯಾಗಿದೆ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಸಿಸಿ ಕ್ಯಾಮರಾ ಪರಿಶೀಲಿಸಲಾಗುತ್ತಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಡ್ಯೂಕ್ ಬೈಕಿನಲ್ಲಿ ವೇಗವಾಗಿ ಹೊರಟಿದ್ದ ಸ್ಟಾವೇರ್ ಇಂಜಿನಿಯರ್‌ವೊಬ್ಬ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮೃತಪಟ್ಟಿಯಾಗಿದ್ದಾರೆ.
ಹೆಬ್ಬಾಳದ ಕೆಂಪಾಪುರ ನಿವಾಸಿ ಪುನಿತ್ ಯಾದವ್ (37) ಮೃತ ಇಂಜಿನಿಯರ್. ಹಿಂಬದಿ ಸವಾರ ಸಿಂದೂ ಯಾದವ್ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ (ಅ.8ರಂದು) ಬೆಳಗಿನ ಜಾವ 1 ಗಂಟೆ ವೇಳೆ ಯಲಹಂಕ ಮಾರ್ಗವಾಗಿ ವೇಗವಾಗಿ ಬೈಕ್‌ನಲ್ಲಿ ಹೊರಟಿದ್ದರು. ಬೈಕ್ ನಿಯಂತ್ರಣಕ್ಕೆ ಸಿಗದ ಕಾರಣ ವಿಭಜಕಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.