ಸ್ಟಿಂಗ್ ಆಪರೇಷನ್ ವಿವಾದ: ನನ್ನ ಹೆಸರಿಗೆ ಮಸಿ ಬಳಿಯುವ ರಾಜಕೀಯ ಪಿತೂರಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ! Siddaramaiah

ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್​ ಆಪರೇಷನ್​ ವಿವಾದ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಜಾಲತಾಣಗಳಲ್ಲಿ ನನ್ನ ಹೆಸರನ್ನು ಥಳುಕು ಹಾಕಿ ಹರಿಬಿಟ್ಟಿರುವ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ.
Siddaramaiah
ಮಾಜಿ ಸಿಎಂ ಸಿದ್ದರಾಮಯ್ಯ
Published on: 

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಇದು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡುವ ಪ್ರಯತ್ನದಂತೆ ಕಾಣುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah ) ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್​ ಆಪರೇಷನ್​ ವಿವಾದ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಜಾಲತಾಣಗಳಲ್ಲಿ ನನ್ನ ಹೆಸರನ್ನು ಥಳುಕು ಹಾಕಿ ಹರಿಬಿಟ್ಟಿರುವ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಹೆಸರಿನ ಉಲ್ಲೇಖ ಇರುವ ಈ ಸ್ಟ್ರಿಂಗ್ ಆಪರೇಷನ್ ವಿಡಿಯೋ ಅನ್ನು ಯಾವುದೇ ಪತ್ರಿಕೆ, ಚಾನೆಲ್ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಕೋರಿ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ.

Also Read
ಸ್ಟಿಂಗ್ ಆಪರೇಷನ್; ಮಾನಹಾನಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ | Siddaramaiah
Siddaramaiah

ಈ ವಿಷಯದಲ್ಲಿ ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ತಿಳಿದಿದೆ. ತೆರೆದ ಪುಸ್ತಕದಂತಿರುವ ನನ್ನ ಐದು ದಶಕಗಳ ರಾಜಕೀಯ ಜೀವನದ ಅರಿವು ಇರುವ ರಾಜ್ಯದ ಜನತೆಗೂ ಇದು ಗೊತ್ತಿದೆ ಎನ್ನುವ ವಿಶ್ವಾಸ ನನಗಿದೆ. ಆದರೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆಯೇ ಹೊರತು ಉಳಿದಂತೆ ಯಾವ ಭಯವೂ ನನಗಿಲ್ಲ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವ ವಿಶ್ವಾಸವೂ ನನಗಿದೆ.

ನಾನು ಸಂಪೂರ್ಣವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು. ಇಲ್ಲಿಯ ವರೆಗಿನ ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದವನಲ್ಲ. ಆದರೆ ಕೆಲವು ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೂಲಕ ಪ್ರಕಟಣೆ-ಪ್ರಸಾರಕ್ಕೆ ತಡೆಯಾಜ್ಞೆ ತರಬೇಕಾದ ಪ್ರಸಂಗ ಬಂದಿದೆ. ಈ ಬಗ್ಗೆ ನನಗೆ ವಿಷಾದವಿದೆ.

ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಾನು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಆ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವೂ ನನಗಿದೆ. ಅಲ್ಲಿಯ ವರೆಗೆ ಮಾಧ್ಯಮಗಳು ಮಾತ್ರವಲ್ಲ ಸಾರ್ವಜನಿಕರು ಕೂಡಾ ಅನಗತ್ಯವಾಗಿ ಇಂತಹ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡದೆ ಸತ್ಯದ ಪರವಾಗಿ ನಿಲ್ಲಬೇಕೆಂದು ಕೋರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Also Read
ಅಹಿಂದ ನಾಯಕ ಸಿದ್ದರಾಮಯ್ಯರನ್ನೂ ಬಿಡಲಿಲ್ಲ ಸ್ಟೇ ತೆಗೆದುಕೊಳ್ಳುವಂತೆ ಮಾಡಿದ್ರು: ಸಿಎಂ ಡಿಕೆಶಿ ವಿರುದ್ಧ ಎಚ್​ಡಿಕೆ ವಾಗ್ದಾಳಿ..! HD Kumaraswamy
Siddaramaiah

ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ

ಇನ್ನೂ ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್​ ಆಪರೇಷನ್​ ವಿವಾದದ ಬಗ್ಗೆ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿಕೆ ಶಿವಕುಮಾರ್, ಬಹಳ ಸಂತೋಷ, ಕುಮಾರಸ್ವಾಮಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಒಳ್ಳೆಯ ವಿಚಾರವನ್ನು ರಾಜ್ಯದ ಗಮನ ಸೆಳೆದಿದ್ದಾರೆ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ. ಏನೇನು ದಾಖಲೆಗಳು ಇವೆ ಎಂಬುದನ್ನು ತರಿಸುತ್ತೇವೆ. ಆ ದಾಖಲೆಗಳನ್ನು ಅವರಿಗೆ ಕಳುಹಿಸ್ತೀನಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net