ಶಿವಶಂಕರಪ್ಪ ಸಾಹುಕಾರ್, ಗೀತಾ ಬಂಧನ

ಕೆಪಿಎಸ್ಸಿ ಹಗರಣ ಪ್ರಕರಣ, ಅಕ್ರಮ ಹಣ ವರ್ಗಾವಣೆ ಆರೋಪ, ತಡರಾತ್ರಿವರೆಗೆ ವಿಚಾರಣೆ
Shivashankrapfp Sahukar
Shivashankrapfp Sahukar
Published on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ನಡೆದಿರುವ ಸಾಲು ಸಾಲು ಪರೀಕ್ಷಾ ಹಗರಣಕ್ಕೆ ಸಂಬಂಧಿಸಿದಂತೆ ಅಮಾನತ್ತುಗೊಂಡಿದ್ದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಅವರ ನಿವಾಸದ ಮೇಲೆ ಮಂಗಳವಾರ ಮಾಧ್ಯಾಹ್ನ ದಾಳಿ ನಡೆಸಿದ ಅಧಿಕಾರಿಗಳ ತಂಡ ಆರೋಪಿ ಸಾಹುಕಾರ್‌ನನ್ನು ವಶಕ್ಕೆ ಪಡೆದು, ನಂತರ ಬಂಧಿಸಿದ್ದಾರೆ. ಅಲ್ಲದೇ ಕೆಪಿಎಸ್‌ಸಿ ಸದಸ್ಯೆ ಬಿ.ವಿ.ಗೀತಾ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದ ಅಧಿಕಾರಿಗಳು, ಸಾಹುಕಾರ್ ನಿವಾಸಕ್ಕೆ ಗೀತಾ ಅವರನ್ನು ಕರೆತಂದು ಇಬ್ಬರನ್ನು ಪರಸ್ಪರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಹುಕಾರ್ ಸಂಬಂಧಿ ಜಾಕ್ ವಶಕ್ಕೆ:

ಶಿವಶಂಕರಪ್ಪ ಸಾಹುಕಾರ್ ಸಂಬಂಧಿ ಹಾಗೂ ಪಶುವೈದ್ಯಾಧಿಕಾರಿ ಪರೀಕ್ಷೆ ಬರೆದು 450ಕ್ಕೂ ಹೆಚ್ಚು ಅಂಕ ಪಡೆದಿದ್ದ ಅಭ್ಯರ್ಥಿ ಸೂಗುರೇಶ್ ಜಾಕ್ ಎಂಬಾತನನ್ನು ಸಾಹುಕಾರ್ ಮನೆಗೆ ಕರೆತಂದಿರುವ ಅಧಿಕಾರಿಗಳು ಕೆಲ ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದಾರೆ. ಮೂವರು ಆರೋಪಿಗಳನ್ನು ಒಂದು ಕಡೆ ಸೇರಿಸಿ ಪರೀಕ್ಷಾ ಅಕ್ರಮದ ಕೆಲವು ಮಹತ್ವದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಎರಡನೇ ಬಾರಿ ದಾಳಿ:

ಕಳೆದ ಆಗಸ್ಟ್ 18ರಂದು ಸಾಹುಕಾರ್ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿ, ಸತತ ಮೂರು ದಿನಗಳ ಕಾಲ ಶೋಧ ನಡೆಸಿತ್ತು. ಪರೀಕ್ಷಾ ನೇಮಕಾತಿಗೆ ಸಂಬಂಧಿಸಿದ ಹಲವು ಮಾಹಿತಿ, ಕಂಪ್ಯೂಟರ್ ಹಾರ್ಡ್ ಡಿಸ್ಕ್, ಸಿಸಿ ಕ್ಯಾಮರಾ ುಟೇಜ್ ಸೇರಿ ಬ್ಯಾಂಕ್ ಅಧಿಕಾರಿಗಳನ್ನು ಸಾಹುಕಾರ್ ನಿವಾಶಕ್ಕೆ ಕರೆದು ಹಣಕಾಸು ವ್ಯವಹಾರ ನಡೆಸಿರುವ ಬಗ್ಗೆ ದಾಖಲೆ ಪರಿಶೀಲನೆ ನಡೆಸಿದ್ದರು. ಎರಡು ತಿಂಗಳ ಬಳಿಕ ಮತ್ತೆ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ಶಾಂತಾ ಹೊಸಮನಿ ಅವರಿಗೂ ಬಂಧನ ಭೀತಿ ಎದುರಾಗುವ ಸಾಧ್ಯತೆ ಇದೆ.

ಸರಣಿ ಅಕ್ರಮಗಳು ಬೆಳಕಿಗೆ:

ಪಶುವೈದ್ಯಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆ 400 ಹುದ್ದೆಗಳ ನೇಮಕಾತಿ ವೇಳೆ ನಡೆದ ಅಕ್ರಮದ ತನಿಖೆಗೆ ಮುಂದಾಗಿದ್ದ ಅಧಿಕಾರಿಗಳಿಗೆ ಜಲಸಂಪನ್ಮೂಲ ಇಲಾಖೆ, ಕೈಗಾರಿಕಾ ವಿಸ್ತರಣಾಧಿಕಾರಿಗಳು, ಗೆಜೆಟೆಡ್ ಪ್ರೊಬೇಷನರಿ, ಬ್ರೇಕ್ ಇನ್‌ಸ್ಪೆಕ್ಟರ್ ಸೇರಿ ಹಲವು ನೇಮಕಾತಿ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಕೆಪಿಎಸ್‌ಸಿ ಕರ್ಮಕಾಂಡ ರಾಜ್ಯ ಸೇರಿ ದೇಶಾದ್ಯಂತ ತೀವ್ರ ಚರ್ಚೆಯಾಗಿತ್ತು. ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಸಂಗ್ರಹ, ಪ್ರಶ್ನೆಪತ್ರಿಕೆ ಸೋರಿಕೆ, ಆಯೋಗದ ನಿಮಯ ಗಾಳಿಗೆ ತೂರಿ ಅಕ್ರಮ ಎಸಗಿದ್ದರು. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ನಾಲ್ಕು ಎ್ಐಆರ್‌ಗಳು ದಾಖಲಾಗಿದ್ದವು. ಕೆಲ ಎ್ಐಆರ್‌ಗಳಲ್ಲಿ ಸಾಹುಕಾರ್ ಮೇಲೆ ಗಂಭೀರ ಆರೋಪಗಳು ಇದ್ದವು.

ಜ್ಞಾನೇಂದ್ರ ಮಾಹಿತಿ ಆಧರಿಸಿ ಬಂಧನ?

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಇ.ಡಿ ಅಧಿಕಾರಿಗಳು ಸೆಪ್ಟಂಬರ್ 29ರಂದು 8ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ಜ್ಞಾನೇಂದ್ರ ಪರೀಕ್ಷಾ ಅಕ್ರಮದ ಕುರಿತು ಸಾಹುಕಾರ್ ಸೇರಿ ಕೆಲ ಸದಸ್ಯರ ಹೆಸರುಗಳನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಅವರ ಹೇಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆಯಾಗಿರುವ ಮಾಹಿತಿ ಸಂಗ್ರಹಿಸಿ ಸಾಹುಕಾರ್ ಅವರಮ್ಮಿ ಬಂಧನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಮಧ್ಯವರ್ತಿ ಬಸವರಾಜ್ ಕನ್ನಾಳೆಯೊಂದಿಗೆ ಜ್ಞಾನೇಂದ್ರ ನಡೆಸಿರುವ ಅಕ್ರಮದ ಸಾಕ್ಷಾೃಧಾರಗಳನ್ನು ಮುಂದಿಟ್ಟುಕೊಂಡು ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಸತ್ಯ ಬಾಯಿಬಿಟ್ಟಿರುವ ಆರೋಪಿ ಜ್ಞಾನೇಂದ್ರ, ಅಭ್ಯರ್ಥಿಗಳ ಸಂದರ್ಶನ ವೇಳೆ ಸಾಹುಕಾರ್ ಮತ್ತು ಅವರ ಆಪ್ತರು ಎನ್ನಲಾದ ಆಯೋಗದ ಕೆಲ ಸದಸ್ಯರು ಸೇರಿಕೊಂಡು ಹಣ ಪಡೆದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವುದು ಬೆಳಕಿಗೆ ಬಂದಿತ್ತು. ಅಕ್ಟೋಬರ್ 3ರಿಂದ ಸಾಹುಕಾರ್ ವಿರುದ್ಧ ತನಿಖೆ ತೀವ್ರ ಗೊಳಿಸಿದ್ದ ಇಡಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net