ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ

ಸಿಎಂಗೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ
ಪ್ರತಿಪಕ್ಷ ನಾಯಕ ಆರ್.ಅಶೋಕ್
ಪ್ರತಿಪಕ್ಷ ನಾಯಕ ಆರ್.ಅಶೋಕ್
Published on: 

ಬೆಂಗಳೂರು: ಕಬ್ಬು ಬೆಳೆಗಾರರ ಸಂಕಷ್ಟ ಪರಿಹರಿಸಲು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ.

ಬೆಳೆಗಾರರು ಪ್ರತಿಭಟನೆ ನಡೆಸಿದ ಕೂಡಲೇ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಬೆಳೆಗಾರರ ಅಹವಾಲುಗಳನ್ನು ಆಲಿಸಿದ್ದಾರೆ. ಕೇಂದ್ರ ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಂದ್ ಅಧ್ಯಕ್ಷತೆಯ ಜಂಟಿ ಸಮಿತಿಯು ಬೆಳೆಗಾರರ ಆದಾಯ ಹೆಚ್ಚಿಸುವುದು, ಉತ್ಪಾದನಾ ವೆಚ್ಚ ಮತ್ತು ಸಕ್ಕರೆ ಉದ್ಯಮದ ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲಿದೆ. ಕಬ್ಬು ಬೆಳೆಗಾರರ ಒಟ್ಟು 7 ಬೇಡಿಕೆಗಳನ್ನು ಈಡೇರಿಸುವ ಕುರಿತು ಸಮಿತಿ ಶಿಫಾರಸು ಮಾಡಲಿದೆ. ಕೇಂದ್ರ ಸರ್ಕಾರ ತನ್ನ ವತಿಯಿಂದ ಮಾಡಬೇಕಾದ ಸಂಪೂರ್ಣ ಪ್ರಯತ್ನಗಳನ್ನು ಮಾಡಿದೆ ಎಂದು ಆರ್.ಅಶೋಕ್ ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 2026-27ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್‌ಗೆ 365 ರೂ. ಎಫ್‌ಆರ್‌ಪಿ ನಿಗದಿಪಡಿಸಿದೆ. ಶೇ.10.25ರ ಮೂಲ ಇಳುವರಿ ದರವನ್ನು ಆಧರಿಸಿ ಎಫ್‌ಆರ್‌ಪಿ ನಿಗದಿ ಮಾಡಲಾಗಿದೆ. ಶೇ.10.25ಕ್ಕಿಂತ ಹೆಚ್ಚಿನ ಇಳುವರಿಯಲ್ಲಿ ಪ್ರತಿ ಶೇ.0.1 ಹೆಚ್ಚಳಕ್ಕೆ ಕ್ವಿಂಟಾಲ್‌ಗೆ 3.56 ರೂ. ಜಾಸ್ತಿಯಾಗುತ್ತದೆ. ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ 2018ರಲ್ಲಿ ಕಬ್ಬಿಗೆ ಎಂಎಸ್‌ಪಿ (ಕನಿಷ್ಠ ಮಾರಾಟ ಬೆಲೆ) ನೀಡಲಾಗಿದೆ. ಈಗ ಎಂಎಸ್‌ಪಿ ದರ 31 ರೂ. ಇದ್ದು, ಕನಿಷ್ಠ ಮಾರಾಟ ದರ 47 ರೂ. ಇದೆ. ನಡುವೆ ಈ ದರ 63 ರೂ. ಆಗಿತ್ತು. ಕೇಂದ್ರ ಸರ್ಕಾರ ತನ್ನ ವತಿಯಿಂದ ಮಾಡಬೇಕಾದ ಸಂಪೂರ್ಣ ಪ್ರಯತ್ನಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಜವಾಬ್ದಾರಿ

* ತೂಕದಲ್ಲಿ ಮೋಸವಾಗುವುದನ್ನು ತಪ್ಪಿಸಲು ಕಾರ್ಖಾನೆಗಳ ಬಳಿ ವೇ ಬ್ರಿಡ್ಜ್ ಅಳವಡಿಕೆ

* ಕಬ್ಬಿಗೆ ವಿವಿಧ ಕಾರ್ಖಾನೆಗಳಲ್ಲಿ ಇಳುವರಿ ವ್ಯತ್ಯಾಸ ತೋರಿಸುವ ರಿಕವರಿ ವಂಚನೆ ತಪ್ಪಿಸಬೇಕು

* ವಾಸ್ತವಕ್ಕಿಂತ ಹೆಚ್ಚು ತ್ಯಾಜ್ಯ ತೋರಿಸಿ ಮೋಸ ಮಾಡುವುದನ್ನು ತಡೆಯಬೇಕು

* ಲ್ಯಾಬ್ ಪರೀಕ್ಷೆ ಮತ್ತು ಬೆಳೆ ವಿಮೆ ವಿಚಾರದಲ್ಲಿ ಬೆಳೆಗಾರರ ಹಿತರಕ್ಷಣೆಗೆ ಕ್ರಮವಹಿಸಬೇಕು

* ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಪ್ರತಿ ಯೂನಿಟ್ ವಿದ್ಯುತ್‌ಗೆ 2.80 ರೂ. ನಿಗದಿಪಡಿಸಿರುವ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಂದ 22 ರೂ. ನೀಡಿ ವಿದ್ಯುತ್ ಖರೀದಿಸುವುದನ್ನು ತಪ್ಪಿಸಬೇಕು

* ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಬಾಬ್ತು 5 ಲಕ್ಷ ರೂ. ಇದ್ದು, 1 ಕೋಟಿ ರೂ.ಗೆ ಏರಿಸಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net