ರಾಜಧಾನಿಯಲ್ಲಿ ಫುಟ್​​ಪಾತ್​​​ ಒತ್ತುವರಿ ತೆರವು ಸ್ಥಗಿತ

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಐದೂ ಕಾರ್ಪೋರೇಷನ್‌ಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತ ಭಾಗಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿದ್ದವು. ಈ ಕಾರ್ಯಾಚರಣೆಗೆ ಮೂರು ತಿಂಗಳು ಮುಗಿಯುತ್ತಿದ್ದಂತೆ ತೆರವು ಕೆಲಸವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.
ಬೆಂಗಳೂರಿನಲ್ಲಿ ಫುಟ್​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ
ಫುಟ್​ಪಾತ್ ತೆರವು ಕಾರ್ಯಾಚರಣೆ
Published on: 

ಬೆಂಗಳೂರು: ಪಂಚ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೇಳಿಸುತ್ತಿದ್ದ ಜೆಸಿಬಿ ಗರ್ಜನೆ ಈಗ ಸದ್ದಿಲ್ಲದೆ ತೆರೆಮರೆಗೆ ಸರಿದಿದೆ.

ಪಾದಚಾರಿಗಳಿಗೆ ಸುಗಮ ಹಾಗೂ ಸುರಕ್ಷಿತ ಫುಟ್‌ಪಾತ್ ಸೌಲಭ್ಯ ಕಲ್ಪಿಸಲು ಕಳೆದ ಜು.1ರಿಂದ ಆರಂಭಿಸಿದ್ದ ಈ ಕಾರ್ಯಾಚರಣೆಗೆ ಸಾರ್ವಜನಿಕರು ಬೆಂಬಲಿಸಿದ್ದರೂ, ಬೀದಿ ಬದಿ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಐದೂ ಕಾರ್ಪೋರೇಷನ್‌ಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತ ಭಾಗಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿದ್ದವು. ಈ ಕಾರ್ಯಾಚರಣೆಗೆ ಮೂರು ತಿಂಗಳು ಮುಗಿಯುತ್ತಿದ್ದಂತೆ ತೆರವು ಕೆಲಸವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.

ರಾಜಧಾನಿಯಲ್ಲಿ 5 ಸಾವಿರ ಕಿ.ಮೀ. ಉದ್ದದಷ್ಟು ಫುಟ್‌ಪಾತ್‌ಗಳಲ್ಲಿ ಒತ್ತುವರಿ ಇದ್ದು, ಈ ಪೈಕಿ ಪ್ರಮುಖ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ತೆರವು ಕಾರ್ಯಕ್ಕೆ ಒತ್ತು ನೀಡಲಾಗಿತ್ತು. ಸುಮಾರು 2 ಸಾವಿರ ಕಿ.ಮೀ. ತೆರವು ಮಾಡುವ ಗುರಿಯೊಂದಿಗೆ ಆರಂಭವಾದ ಕಾರ್ಯಾಚರಣೆಯಲ್ಲಿ ಈವರೆಗೆ 1,358 ಕಿ.ಮೀ. ಉದ್ದದಷ್ಟು ತೆರವುಮುಕ್ತಗೊಳಿಸಲಾಗಿದೆ. ಮೊದಲ ತಿಂಗಳು ಭರ್ಜರಿಯಾಗಿಯೇ ನಡೆದ ತೆರವು ಕಾರ್ಯ ವಾರದ ರಜಾದಿನವೂ ಮುಂದುವರಿದಿತ್ತು. ಎರಡನೇ ತಿಂಗಳಿನಲ್ಲಿ ವ್ಯಾಪಾರಿಗಳ ಆಕ್ಷೇಪದ ಮಧ್ಯೆಯೂ ವಿರೋಧ ಕೇಳಿಬಾರದ ಸ್ಥಳಗಳಲ್ಲಿ ಮಾತ್ರ ಕಾರ್ಯಾಚರಣೆ ಕೈಗೊಳ್ಳಲಾಯಿತು. 100 ದಿನಗಳು ಪೂರೈಸುತ್ತಿದ್ದಂತೆ ಇದ್ದಕ್ಕಿದ್ದಂತೆ ತೆರವು ಕಾರ್ಯಕ್ಕೆ ಪೂರ್ಣ ವಿರಾಮ ಹಾಕಲಾಗಿದೆ.

ತೆರವು ಜಾಗದಲ್ಲೇ ಮತ್ತೆ ವ್ಯಾಪಾರ:

ಐದೂ ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ತೆರವು ಕಾರ್ಯಾಚರಣೆ ವೇಳೆ ಅನಧಿಕೃತವಾಗಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದವರಿಗೆ ಎಚ್ಚರಿಕೆ ನೀಡಿ ಎತ್ತಂಗಡಿ ಮಾಡಲಾಗಿತ್ತು. ಇದರಿಂದಾಗಿ ಹಲವೆಡೆ ಸಾರ್ವಜನಿಕರು ಸುಲಭವಾಗಿ ನಡೆದಾಡಲು ಅವಕಾಶವಾಗಿತ್ತು. ಆದರೀಗ ತೆರವು ಮಾಡಲಾದ ಸ್ಥಳಗಳಲ್ಲೇ ಮತ್ತೆ ವ್ಯಾಪಾರಿಗಳು ಪ್ರತ್ಯಕ್ಷರಾಗಿದ್ದಾರೆ. ಮುಖ್ಯವಾಗಿ ಕೇಂದ್ರ ಪಾಲಿಕೆಯ ಮಾರುಕಟ್ಟೆ ಪ್ರದೇಶ, ಬಸ್ ನಿಲ್ದಾಣ, ಸಾರ್ವಜನಿಕ ತಾಣಗಳಲ್ಲಿ ವರ್ತಕರು ರಸ್ತೆ ಹಾಗೂ ಫುಟ್‌ಪಾತ್ ಜಾಗವನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಹಲವೆಡೆ ಹಿಂದಿನ ಸ್ಥಿತಿಯೇ ಮರುಕಳಿಸಿದ್ದು, ಸುಗಮ ಓಡಾಟಕ್ಕೆ ಅಡ್ಡಿಯಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಎಸ್‌ಐಆರ್‌ನಿಂದಾಗಿ ತೆರವು ಕಾರ್ಯ ಸ್ಥಗಿತ?:

ಜಿಬಿಎ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ಜನಗಣತಿಯ ಪೂರ್ವಭಾವಿಯಾಗಿ ಮನೆ ಮನೆ ಗಣತಿ ಬಳಿಕ ಎಸ್‌ಐಆರ್ ಕಾರ್ಯದಲ್ಲಿ ಪಾಲಿಕೆಯ ಬಹುತೇಕ ಅಧಿಕಾರಿ, ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಈ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದರೂ, ಬಹುತೇಕ ಅಧಿಕಾರಿಗಳು ಎಸ್‌ಐಆರ್‌ನತ್ತಲೇ ಬೊಟ್ಟು ಮಾಡುತ್ತಿದ್ದಾರೆ. ಜತೆಗೆ ತೆರವು ಕಾರ್ಯಕ್ಕೆ ಕಾರ್ಮಿಕರ ಅಭಾವವೂ ಕಾಡುತ್ತಿದೆ. ಸದ್ಯದಲ್ಲೇ ಜಿಬಿಎಯಿಂದ ಆಸ್ತಿತೆರಿಗೆ ವಿಚಾರವಾಗಿ ಮನೆ ಮನೆ ಸಮೀಕ್ಷೆ ಕೈಗೊಳ್ಳಲಿದ್ದು, ಅಧಿಕಾರಿ, ಸಿಬ್ಬಂದಿ ಅತ್ತ ದೃಷ್ಟಿಹರಿಸಲಿದ್ದಾರೆ. ಹಾಗಾಗಿ ಒತ್ತುವರಿ ತೆರವು ಕಾರ್ಯಕ್ಕೆ ಸಮಯದ ಅಭಾವ ಕಾಡುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ಅವಶೇಷದ ತ್ಯಾಜ್ಯ ಸಾಗಣೆ:

ಫುಟ್‌ಪಾತ್ ಒತ್ತುವರಿ ತೆರವು ವೇಲೆ ಸೃಷ್ಟಿಯಾದ ಕಸ ಹಾಗೂ ಪಾದಚಾರಿ ಮಾರ್ಗಗಳ ಮೇಲಿದ್ದ ಡೆಬ್ರಿಸ್ ಸೇರಿ ಒಟ್ಟು 5,261.95 ಟನ್ ಅವಶೇಷ ತ್ಯಾಜ್ಯವನ್ನು ಹೊಸಸಾಗಿಸಲಾಗಿದೆ. ಅದರಲ್ಲೂ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 2,251 ಟನ್ ಹೆಚ್ಚಿನ ಡೆಬ್ರಿಸ್ ಕಂಡುಬಂದಿತ್ತು. ಪೂರ್ವ-1,444.60 ಟನ್, ಪೂರ್ವ-909.95 ಟನ್, ಪಶ್ಚಿಮ-567 ಟನ್ ಹಾಗೂ ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 173.10 ಟನ್ ಅವಶೇಷ ತ್ಯಾಜ್ಯವನ್ನು ಹೊರಸಾಗಿಸಿ ಶುಚಿಗೊಳಿಸಲಾಗಿತ್ತು.

ಫುಟ್‌ಪಾತ್ ಒತ್ತುವರಿ ತೆರವು ವಿವರ:

ಪಾಲಿಕೆ ತೆರವು* ಮಳಿಗೆ ಮೆಟ್ಟಿಲು/ರಾಂಪ್

ಪೂರ್ವ 249.49 1,031 839

ಪಶ್ಚಿಮ 305.58 700 997

ಉತ್ತರ 300.11 690 1,804

ದಕ್ಷಿಣ 275.90 766 823

ಕೇಂದ್ರ 256.55 944 456

ಒಟ್ಟು 1358.02 4,069 4,880

* ಕಿ.ಮೀ.ಗಳಲ್ಲಿ

ಫುಟ್‌ಪಾತ್ ದುರಸ್ತಿಗೆ ಆಮೆವೇಗ:

ತೆರವು ಕಾರ್ಯಾಚರಣೆ ಕೈಗೊಳ್ಳಲಾದ ಸ್ಥಳಗಳಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿ ಕೈಗೊಳ್ಳಲು ಎಲ್ಲ ಪಾಲಿಕೆಗಳಿಗೆ ಜಿಬಿಎ ಮುಖ್ಯ ಆಯುಕ್ತರು ಸೂಚಿಸಿದ್ದರು. ಆದರೆ, ಎಲ್ಲ ಕಾರ್ಪೋರೇಷನ್‌ಗಳು ದುರಸ್ತಿಗೆ ಬೆನ್ನು ತಿರುಗಿಸಿದಂತಿದೆ. ಈವರೆಗೆ 90.11 ಕಿ.ಮೀ. ಉದ್ದದ ಫುಟ್‌ಪಾತ್‌ಗಳನ್ನು ರಿಪೇರಿ ಮಾಡಿದ್ದರೂ, ಉಳಿದೆದೆ ದುರಸ್ತಿ ಕೈಗೊಂಡಿಲ್ಲ. ಪೂರ್ವ ಪಾಲಿಕೆಯಲ್ಲಿ 5.40 ಕಿ.ಮೀ., ಪಶ್ಚಿಮ-30.21 ಕಿ.ಮೀ., ಉತ್ತರ-44.60 ಕಿ.ಮೀ., ದಕ್ಷಿಣ-8.25 ಕಿ.ಮೀ. ಹಾಗೂ ಕೇಂದ್ರ ಪಾಲಿಕೆಯಲ್ಲಿ 28.33 ಕಿ.ಮೀ. ಫುಟ್‌ಪಾತ್ ಮಾತ್ರ ದುರಸ್ತಿ ಮಾಡಲಾಗಿದೆ.

ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹಿಂದೇಟು:

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ವೇಳೆ ದೊಡ್ಡ ಪ್ರಮಾಣದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಇವರಲ್ಲಿ ಕೆಲವರು ತೀರಾ ಬಡವರಿದ್ದು, ಬೀದಿ ಬದಿ ವ್ಯಾಪಾರ ಮಾಡಿಕೊಂಡೇ ಜೀವನೋಪಾಯ ಮಾಡುತ್ತಿದ್ದರು. ಇಂತಹವರಿಗೆ ನಿಯಮದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹೈಕೋರ್ಟ್ ಜಿಬಿಎಗೆ ನಿರ್ದೇಶನ ನೀಡಿತ್ತು. ಜತೆಗೆ ಬೆಂಗಳೂರು ಅಭಿವೃದ್ಧಿ ಸಚಿವರು ಕೂಡ ಕಾಲಮಿತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರೂ, ಈವರೆಗೂ ಅಧಿಕಾರಿ ವರ್ಗ ಹಿಂದೇಟು ಹಾಕುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ತೆರವು ಕಾರ್ಯಾಚರಣೆಯ ವಿವರ:

* ಫುಟ್‌ಪಾತ್ ತೆರವು - 1,358.02 ಕಿ.ಮೀ. ಉದ್ದ

* ಅಂಗಡಿಗಳ ಮೆಟ್ಟಿಲು/ರಾಂಪ್ - 4,880

* ತಾತ್ಕಾಲಿಕ ಮಳಿಗೆ - 4,069

* ತಳ್ಳುಗಾಡಿಗಳು - 4,617

* ಎ.ಸಿ ಶೀಟ್/ಕ್ಯಾನೋಪಿ - 5,512

* ನಾಮಫಲಕ, ಬಿಲ್‌ಬೋರ್ಡ್ - 7,663

* ತಾತ್ಕಾಲಿ/ಕಾಯಂ ಶೆಡ್ - 637

* ಅವಶೇಷ ತೆರವು - 5,261.95 ಟನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net