

ಭೈರವಿ ನಾಟ್ಯಶಾಲೆಯ ವತಿಯಿಂದ ರಂಗರಾಮ ಮಹೋತ್ಸವ
ಬೆಂಗಳೂರು: ಕಲೆಗೆ ಮತ್ತು ಯುವ ಕಲಾವಿದರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಲಾ ಉತ್ಸವಗಳು ಪೂರಕವಾಗಿವೆ ಎಂದು ಹಿರಿಯ ವಿದುಷಿ ಸೀತಾ ಕೋಟೆ ಹೇಳಿದರು. ನಗರದ ನಯನ ಸಭಾಂಗಣದಲ್ಲಿ ವಿದ್ವಾನ್ ಭರತ್ ನಾರಾಯಣ ಅವರ ಭೈರವಿ ನಾಟ್ಯಶಾಲೆಯ ವತಿಯಿಂದ ಆಯೋಜನೆ ಗೊಂಡಿದ್ದ ವಾರ್ಷಿಕ ‘ರಂಗರಾಮ ಮಹೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರು ಪರಸ್ಪರ ಸಹಕಾರದಿಂದ ಅಭಿವೃದ್ಧಿ ಹೊಂದಬೇಕು. ಶಿಷ್ಯ ಸಮೂಹವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಇತರ ಗುರುಗಳು ಮತ್ತು ಅವರ ಶಿಷ್ಯರಿಗೂ ವೇದಿಕೆ ನೀಡಬೇಕು. ಆಗ ಕಲಿಕಾರ್ಥಿಗಳಿಗೆ ಸ್ಫೂರ್ತಿ ದೊರಕುತ್ತದೆ ಎಂದರು.
ವಿದ್ವಾನ್ ಭರತ್ ನಾರಾಯಣ ಅವರು ಹೊಸ ಹೊಸ ಪ್ರಯೋಗಗಳ ಮೂಲಕ ನೃತ್ಯ ಕಲಾರಂಗಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರ ಅಜ್ಜಿ ಮತ್ತು ತಾತನ ಸ್ಮರಣಾರ್ಥ ಪ್ರತಿ ವರ್ಷವೂ ‘ರಂಗರಾಮ ಮಹೋತ್ಸವ’ ಆಯೋಜನೆ ಮಾಡುತ್ತಿದ್ದಾರೆ. ಹಿರಿಯರ ಸ್ಮರಣಾರ್ಥ ಭರತ್ ಅವರು ಮಾಡುತ್ತಿರುವ ಯತ್ನಗಳು ಸಾರ್ಥಕವಾಗಲಿ. ನಾಡಿಗೆ ಉತ್ತಮ ಯುವ ಕಲಾವಿದರು ಪ್ರಾಪ್ತವಾಗಲಿ ಎಂದು ಸೀತಾ ಕೋಟೆ ಆಶಿಸಿದರು. ತಮ್ಮ ಗುರುಗಳಾದ ಕರ್ನಾಟಕ ಕಲಾ ತಿಲಕ. ನಾಟ್ಯಾಚಾರ್ಯ ಮುರಳೀಧರ ರಾವ್ ರವರ ಜೀವನ ಮತ್ತು ಸಾಧನೆಗಳನ್ನು ನೆನೆದು ಭಾವುಕರಾದರು.
ಗುರು-ಶಿಷ್ಯ ಪರಂಪರೆ ಮುಂದುವರಿಯಬೇಕು: ವಿದುಷಿ ನಯನಾ ಶಿವರಾಮ್ ಮಾತನಾಡಿ, ಗುರು-ಶಿಷ್ಯ ಪರಂಪರೆ ಮುಂದುವರಿಯಬೇಕು. ಪುರಾತನ ನೃತ್ಯ ಶೈಲಿಗಳನ್ನು ಉಳಿಸಿ ಬೆಳೆಸಲು ಇಂಥ ಉತ್ಸವಗಳು ಅತ್ಯಗತ್ಯ ಎಂದರು. ಗುರುವಿನೊಂದಿಗೆ ಶಿಷ್ಯರು ಎಷ್ಟು ಧನ್ಯತೆ ಮತ್ತು ಅನುಸರಣೆ ಉಳಿಸಿಕೊಳ್ಳುತ್ತಾರೋ ಅಷ್ಟರ ಮಟ್ಟಿಗೆ ಜ್ಞಾನ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಭರತ್ ಅವರ ಗುರುಭಕ್ತಿ ಅನನ್ಯವಾಗಿದೆ ಎಂದವರು ಹೇಳಿದರು.
ಗಮನಸೆಳೆದ ಮಾರ್ಗಂ:
ವಿದುಷಿ ನಯನಾ ಶಿವರಾಮ್ ಅವರ ಮಾರ್ಗಂ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು. ನಂತರ ಭೈರವಿ ನಾಟ್ಯಶಾಲೆ, ಸೃಜನ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕಲಾಗೌರಿ ನೃತ್ಯಾಲಯ ಹಾಗೂ ಶ್ರೀಕಂಠೇಶ್ವರ ಕಲಾಕೇಂದ್ರದ ವಿದ್ಯಾರ್ಥಿಗಳ ನರ್ತನ ಪ್ರದರ್ಶನ ಮನಸೂರೆಗೊಂಡಿತು. 60ಕ್ಕೂ ಹೆಚ್ಚು ಯುವ ಕಲಾವಿದರಿಗೆ ಉತ್ಸವ ವೇದಿಕೆ ನೀಡಿದ್ದು ಗಮನಾರ್ಹವಾಗಿತ್ತು. ಕಾರ್ಯಕ್ರಮ ಆಯೋಜಕರಾದ ವಿದ್ವಾನ್ ಭರತ್ ನಾರಾಯಣ, ವಿದುಷಿಯರಾದ ಗೌರಿ ಸಾಗರ್, ಪೃಥ್ವಿ ಪಾರ್ಥಸಾರಥಿ ಮತ್ತು ವಿ. ಸುಮತಿ ಇತರರು ಹಾಜರಿದ್ದರು.
ರಂಗರಾಮ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳೊಂದಿಗೆ ವಿದ್ವಾನ್ ಭರತ್ ನಾರಾಯಣ ಅವರ ಭೈರವಿ ನಾಟ್ಯಶಾಲೆ ವಿದ್ಯಾರ್ಥಿಗಳು ಮತ್ತು ಯುವ ಕಲಾವಿದರು.