

ಬೆಂಗಳೂರು: ಟೆನ್ನಿಸ್ ಅಕಾಡೆಮಿ ನಿರ್ಮಾಣಕ್ಕಾಗಿ 5 ಎಕರೆ ಜಮೀನು ಮಂಜೂರು ಮಾಡಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದರು.
ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ನಗರದ ಎಸ್.ಎಂ. ಕೃಷ್ಣ ಟೆನ್ನಿಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ಶಿಪ್ ಸಮಾರೋಪದಲ್ಲಿ ಮಾತನಾಡಿದರು.
ಯುವಜನರು ಟೆನ್ನಿಸ್ನಲ್ಲಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಹಾಗಾಗಿ ಟೆನ್ನಿಸ್ ಅಕಾಡೆಮಿ ಸ್ಥಾಪನೆಗೆ 5 ಎಕರೆ ಜಮೀನು ಬೇಕೆಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ಸೂಕ್ತ ಜಮೀನು ಗುರುತಿಸಿ, ಅದನ್ನು ಮಂಜೂರು ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದರು.
ಚಿನ್ನದ ಪದಕ ವಿಜೇತರಿಗೆ 1 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ರೂ. ಮತ್ತು ಕಂಚಿನ ಪದಕ ವಿಜೇತರಿಗೆ 50 ಲಕ್ಷ ರೂ. ನಗದು ಪುರಸ್ಕಾರ ನೀಡಿದ್ದೇವೆ. ನಮ್ಮ ಕ್ರೀಡಾಪಟುಗಳು ಇನ್ನಷ್ಟು ಸಾಧನೆ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಚ್ಚಿನ ಪದಕಗಳನ್ನು ತಂದುಕೊಡಲು ಈ ಪುರಸ್ಕಾರಗಳು ಉತ್ತೇಜನ ನೀಡುತ್ತವೆ ಎಂದು ಹೇಳಿದರು.
ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಿದೆ. ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಇದನ್ನು ಶೇ.3ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಬಳಸಿಕೊಂಡು ಅನೇಕರು ಪೊಲೀಸ್ ಇಲಾಖೆ ಸೇರಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ 167 ಕ್ರೀಡಾಪಟುಗಳು, ವಿಜೇತರು, ದ್ವಿತೀಯ ಸ್ಥಾನ ಪಡೆದವರು ಹಾಗೂ ಸಮಗ್ರ ಚಾಂಪಿಯನ್ಗಳನ್ನು ಅಭಿನಂದಿಸಿದರು.
ಈ ವೇಳೆ ಸಚಿವ ರಿಜ್ವಾನ್ ಹರ್ಷದ್, ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ, ನಗರ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹಾಗೂ ಇತರರಿದ್ದರು.