

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ನಿಯಮಗಳನ್ನು ಉಲ್ಲಂಘಿಸಿರುವ ಬೆಂಗಳೂರು ನಗರ ವ್ಯಾಪ್ತಿಯ 9 ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ಒಟ್ಟು 3.65 ಲಕ್ಷ ದಂಡ ವಿಧಿಸಲಾಗಿದೆ.
ಈ ಕುರಿತು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕೆಪಿಎಂಇ ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎಸ್. ಕಾಂತರಾಜು, ನಿಯಮ ಉಲ್ಲಂಘಿಸಿದ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಲೋಪಗಳನ್ನು ಮರುಕಳಿಸದಂತೆ ಮುಚ್ಚಳಿಕೆ ಪತ್ರ ನೀಡಬೇಕು ಎಂದು ಸೂಚಿಸಿದರು. ರೋಗಿಗಳಿಗೆ ಸೂಕ್ತ ಮಾಹಿತಿ ಒದಗಿಸುವುದರ ಜೊತೆಗೆ ಸಾರ್ವಜನಿಕರೊಂದಿಗೆ ಉತ್ತಮ ಸಮನ್ವಯ ಸಾಧಿಸುವಂತೆ ನಿರ್ದೇಶನ ನೀಡಿದರು.
ದಂಡ ವಿಧಿಸಲಾದ ಸಂಸ್ಥೆಗಳ ವಿವರ: ಶಿಫಾ ಆಸ್ಪತ್ರೆ 10 ಸಾವಿರ ರೂ, ಮಲ್ಲಿಕಾ ಆಸ್ಪತ್ರೆ 25 ಸಾವಿರ ರೂ, ಶಾಮಾ ಚಾರಿಟಬಲ್ ಕ್ಲಿನಿಕ್ 10 ಸಾವಿರ ರೂ. , ಕಂಫರ್ಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ 1 ಲಕ್ಷ ರೂ., ಸೆವೆನ್ ಹಿಲ್ಸ್ ಪಾಲಿ ಕ್ಲಿನಿಕ್ 10 ಸಾವಿರ ರೂ, ವೆಸ್ಟ್ ಸೈಡ್ ಆಸ್ಪತ್ರೆ/ಸಂಜೀವಿನಿ ನೋವು ನಿರ್ವಹಣೆ ಮತ್ತು ಪುನರುತ್ಪಾದನಾ ಕೇಂದ್ರ 1 ಲಕ್ಷ ರೂ., ಲ್ಯಾಸಿಂಗ್ಟನ್ ಹೆಲ್ತ್ ಕೇರ್ ಪ್ರೈ.ಲಿ. 50 ಸಾವಿರ ರೂ., ರಝೀಯ ಕ್ಲಿನಿಕ್ 10 ಸಾವಿರ ರೂ. ಹಾಗೂ ಶ್ರೀ ವಿನಾಯಕ ಕ್ಲಿನಿಕ್ 50 ಸಾವಿರ ರೂ. ಸೇರಿ ಒಟ್ಟು 3.65 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇದೇ ವೇಳೆ, ಯಲಹಂಕದ ಮಣಿಪಾಲ್ ಆಸ್ಪತ್ರೆಯು ರೋಗಿಯಿಂದ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಇದಲ್ಲದೆ ಎರಡು ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದ್ದು, ಉಳಿದ ಮೂರು ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಶಿರಾಜುದ್ದೀನ್ ಮದಿನಿ, ಜಿಲ್ಲಾ ಆರೋಗ್ಯಾಧಿಕಾರಿ ನದೀಮ್ ಮೊಹಮ್ಮದ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.