

ಬೇರೊಬ್ಬ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ, ಇಬ್ಬರ ನಡುವೆ ಜಗಳ
ಬೆಂಗಳೂರಿನ ಕಾಟನ್ಪೇಟೆಯ ಓಟಿಸಿ ರಸ್ತೆಯ ಲಾಡ್ಜ್ವೊಂದರಲ್ಲಿ 22 ವರ್ಷದ ಯುವತಿ ಹತ್ಯೆ
ಕೇರಳ ಮೂಲದ ಪ್ರಿಯಕರ ಗೋಕುಲ್ ಕೃಷ್ಣ (23) ಕಾಟನ್ಪೇಟೆ ಪೊಲೀಸರ ವಶಕ್ಕೆ
ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು ನರ್ಸಿಂಗ್ ಕೋರ್ಸ್ ಮುಗಿಸಿ ಬೆಂಗಳೂರಿಗೆ ಬಂದಿದ್ದರು.
ಮತ್ತೊಬ್ಬ ಯುವಕನೊಂದಿಗೆ ಸಂಬಂಧವಿದೆ ಎನ್ನುವ ಅನುಮಾನದಿಂದ ಪ್ರೇಮಿಗಳಿಬ್ಬರ ನಡುವೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಹೌದು, ಕೆಲಸ ಹರಸಿ ಬೆಂಗಳೂರಿಗೆ ಬಂದಿದ್ದ ಕೇರಳ ಮೂಲದ ಯುವತಿ ಗಂಗಾ (22) ತನ್ನ ಪ್ರಿಯಕರ ಗೋಕುಲ್ ಕೃಷ್ಣ (23) ಎಂಬಾತನಿಂದ ಹತ್ಯೆಗೊಳಗಾಗಿದ್ದಾರೆ. ಸದ್ಯ ಆರೋಪಿಯನ್ನು ಕಾಟನ್ಪೇಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಮಾಹಿತಿ ಪ್ರಕಾರ, ಗಂಗಾ ಮತ್ತು ಗೋಕುಲ್ ಕಳೆದ ನಾಲ್ಕು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಇಬ್ಬರು ಒಟ್ಟಿಗೆ ನರ್ಸಿಂಗ್ ಮುಗಿಸಿಕೊಂಡಿದ್ದರು. ಗೋಕುಲ್ಗೆ ಗಂಗಾ ಜೂನಿಯರ್ ಆಗಿದ್ದರು. ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ ನಂತರ ಇಬ್ಬರೂ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಗಂಗಾ ಕೆಲಸದ ಹುಡುಕಾಟದಲ್ಲಿದ್ದರೆ, ಗೋಕುಲ್ ನರ್ಸಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಕೊಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದನು.
ನ.26ರಂದು ಇಬ್ಬರು ಕಾಟನ್ಪೇಟೆಯ ಓಟಿಸಿ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ರೂಪ್ ಪಡೆದುಕೊಂಡು ತಂಗಿದ್ದರು, ಗಂಗಾಗೆ ಬೇರೆ ಯುವಕನ ಜೊತೆ ಸಂಬಂಧ ಇದೆ ಎಂದು ಗೋಕುಲ್ ಅನುಮಾನಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು, ಕೊಲೆಯಾದ ದಿನವೂ ಇದೇ ವಿಚಾರಕ್ಕೆ ಗಲಾಟೆ ಶುರುವಾಗಿ, ವಿಕೋಪಕ್ಕೆ ತಿರಿಗಿದಾಗ ಚಾಕುವಿನಿಂದ ಗಂಗಾ ಅವರ ಹೊಟ್ಟೆಯ ಎಡಭಾಗ ಸೇರಿದಂತೆ ಹಲವು ಕಡೆ ಬರ್ಬರವಾಗಿ ಇರಿದು ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಶುಕ್ರವಾರ ಬೆಳಿಗ್ಗೆ ಲಾಡ್ಜ್ ಸಿಬ್ಬಂದಿ ಕೋಣೆಗಳ ಕ್ಲೀನಿಂಗ್ಗೆಂದು ತೆರಳಿದಾಗ ಮೆಟ್ಟಿಲು ಮತ್ತು ಕೋಣೆಯ ಬಳಿ ರಕ್ತದ ಕಲೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಗಂಗಾ ಕಂಡುಬಂದಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ಆಕೆಯನ್ನು ತಕ್ಷಣವೇ ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.
ಕಾಟನ್ಪೇಟೆ ಪೊಲೀಸರು, ಶ್ವಾನದಳ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ ಬಳಿಕ ಆರೋಪಿ ಗೋಕುಲ್ನನ್ನು ಬಂಧಿಸಿದ್ದಾರೆ.
ಆರೋಪಿಯು ಯುವತಿಗೆ ಕೆಲಸ ಹುಡುಕಿಕೊಡುವ ಸಲುವಾಗಿ ತನ್ನೊಂದಿಗೆ ಕರೆತಂದಿದ್ದನು. ಬೆಳಿಗ್ಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಆರೋಪಿಯು ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲಾದ ಆಯುಧವನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಇದು ಪೂರ್ವನಿಯೋಜಿತ ಕೊಲೆಯೇ ಅಥವಾ ದಿಢೀರ್ ಜಗಳದಿಂದ ನಡೆದ ಕೃತ್ಯವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ, (ಏಜೆನ್ಸೀಸ್).