

ಬೆಂಗಳೂರು: ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ಭಾರತಕ್ಕೆ ಅನ್ಯಾಯ ಆಗಲಿದ್ದು ನಮ್ಮ ರಾಜ್ಯಗಳ ಹಿತ ಕಾಪಾಡಿಕೊಳ್ಳಲು ನಾವು ಧ್ವನಿ ಎತ್ತಲಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಎನ್‌ಡಿಎ ರಾಜಕೀಯ ಮಾಡುತ್ತಿದ್ದು ದಕ್ಷಿಣದ ರಾಜ್ಯಗಳು ಅಲ್ಪಸಂಖ್ಯಾತ ಆಗುವ ಭಯವಿದೆ. ದೇಶದ ಪ್ರಗತಿಗೆ ಶಕ್ತಿ ತುಂಬುತ್ತಿರುವ ದಕ್ಷಿಣ ರಾಜ್ಯಗಳ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಸಿಎಂ ಗುಡುಗಿದರು.
ಈ ಸಂಬಂಧ ದಿಲ್ಲಿಯಲ್ಲಿ ಭಾನುವಾರ ದಕ್ಷಿಣದ ರಾಜ್ಯಗಳ(ಕೇರಳ,ತೆಲಂಗಾಣ, ಕರ್ನಾಟಕ) ಮುಖ್ಯಮಂತ್ರಿಗಳ ಸಭೆ ಆಯೋಜಿಸಿದ್ದು ಅಲ್ಲಿಗೆ ಶನಿವಾರ ರಾತ್ರಿ ಹೊರಟಿದ್ದೇನೆ ಎಂದು ಸಿಎಂ ತಿಳಿಸಿದರು.
ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಆಗುವ ತೊಂದರೆಗಳೇನು?ಉತ್ತರ ಭಾರತದ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳು ಹೆಚ್ಚಾಗಲಿವೆ. ದಕ್ಷಿಣ ಭಾರತದ ಪರಿಸ್ಥಿತಿ ಏನಾಗಲಿದೆ ಎಂದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚೆ ಮಾಡುತ್ತೇವೆ.
ಈ ಹಿಂದೆ ಡಿಎಂಕೆ ಕರೆದ ಸಭೆಯಲ್ಲಿ ಕೂಡ ಭಾಗವಹಿಸಿದ್ದೆ. ನಾವು ನಮ್ಮ ಸಾರ್ವಭೌಮತ್ವ ಉಳಿಸಿ ಕೊಳ್ಳಲು ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರ ಹಿತ ಗಮನದಲ್ಲಿಟ್ಟುಕೊಂಡು ಕ್ಷೇತ್ರ ಪನರ್‌ವಿಂಗಡಣೆಗೆ ಮಸೂದಗೆ ಬೆಂಬಲವಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳೀಕೆಗೆ ಪ್ರತಿಕ್ರಿಯಿಸಿ, ಕನ್ನಡಿಗರಿಗೆ ಅವರ ಕಾಲದಲ್ಲಿ ಏನು ಮಾಡಿದ್ದಾರೆ, ಸುಮ್ಮನೆ ಖಾಲಿ ಮಾತನಾಡುವುದಲ್ಲ ಎಂದು ತಿರುಗೇಟು ನೀಡಿದರು.
ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡುವ ವಿಚಾರ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಈ ಕುರಿತು ಸರ್ವಸಮ್ಮತ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.
ಪರಿಶಿಷ್ಟರ ಮೀಸಲು ವಿಚಾರದಲ್ಲಿ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಬೇಕು ಎಂಬುದು ನಮ್ಮ ಒತ್ತಾಯ ಎಂದು ಸ್ಪಷ್ಟಪಡಿಸಿದರು.