

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ರಾಜಧಾನಿಯ ಅಭಿವೃದ್ಧಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕದೆ ದೀರ್ಘ ಕಾಲದಿಂದ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಜತೆಗೆ ಸಚಿವರ ಆಪ್ತ ಕಾರ್ಯದರ್ಶಿ ಸೇರಿ ಅವರ ಕಚೇರಿ ಸಿಬ್ಬಂದಿ ಮೂಲಕ ಕಮಿಷನ್ ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ರಮೇಶ್ ಅವರು ಸಚಿವರಿಗೆ ಬಹಿರಂಗ ಪತ್ರವನ್ನು ಬರೆದಿದ್ದು, ಉತ್ತರ ನಿಡುವಂತೆ ಒತ್ತಾಯಿಸಿದ್ದಾರೆ.
ನಗರದ 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ ಪ್ಯಾಕೇಜ್‌ಗಳಿಗೆ ಸಂಬಂಧಿಸಿದ 80ಕ್ಕೂ ಹೆಚ್ಚು ಕಡತಗಳನ್ನು ಕಳೆದ ಎರಡು ತಿಂಗಳುಗಳಿಂದ ಸಚಿವರು ಅನುಮೋದನೆ ನೀಡದೆ ಅವರ ಕಚೇರಿಯಲ್ಲಿಯೇ ಉಳಿಸಿಕೊಂಡಿದ್ದಾರೆ. ಟೆಂಡರ್ ಪ್ರಕ್ರಿಯೆ ಕಡತಗಳು ಕೆಳ ಹಂತದಿಂದ ನಗರಾಭಿವೃದ್ಧಿ ಇಲಾಖೆಯವರೆಗೆ ಅಂದರೆ ಕಾರ್ಯಪಾಲಕ ಅಭಿಯಂತರ, ಮುಖ್ಯ ಅಭಿಯಂತರ, ಅಪರ ಆಯುಕ್ತರು (ಅಭಿವೃದ್ಧಿ), ಪಾಲಿಕೆಯ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ - ಈ 5 ಹಂತಗಳಲ್ಲಿ ಅನುಮೋದನೆ ಪಡೆದು ಸಚಿವರ ಸಹಿಗಾಗಿ ಕಾದುಕುಳಿತಿವೆ.
ಇನ್ನೊಂದೆಡೆ, ಸಚಿವರ ಆಪ್ತ ಕಾರ್ಯದರ್ಶಿ ಸೇರಿ ಅವರ ಕಚೇರಿಯ ಸಿಬ್ಬಂದಿಯಿಂದ ಐದು ನಗರ ಪಾಲಿಕೆಗಳ 5 ಮುಖ್ಯ ಅಭಿಯಂತರರ ಮೂಲಕ ಪ್ರತಿ ಕಡತದ ಅನುಮೋದನೆಗೆ ಶೇ.5 ಕಮಿಷನ್ ಹಣವನ್ನು ತಲುಪಿಸುವಂತೆ ಆಯಾ ಕಾರ್ಯಪಾಲಕ ಅಭಿಯಂತರರ ಬಳಿ ಬಹಿರಂಗವಾಗಿ ಕೇಳಲಾಗುತ್ತಿದೆ. ಸಚಿವರ ಹೆಸರಿನಲ್ಲಿ ಪ್ರತಿಯೊಂದು ಪ್ಯಾಕೇಜ್ ಟೆಂಡರ್ ಅನುಮೋದನೆಗೆ ಶೇ.5 ಕಮಿಷನ್ ಹಣ ಕೇಳುತ್ತಿರುವ ಅವರ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೃಷ್ಣಬೈರೇಗೌಡರು ಸಿದ್ಧರಿರುವಿರೇ? ಈ ಪ್ರಶ್ನೆಗಳಿಗೆ ಸಚಿವರು ಕೂಡಲೇ ಬಹಿರಂಗ ಉತ್ತರ ನೀಡಬೇಕು ಎಂದು ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಕೃಷ್ಣಬೈರೇಗೌಡ ಪ್ರತಿನಿಧಿಸುತ್ತಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತುಗಳನ್ನು ಅವರ ಬೆಂಬಲಿಗರು ನಕಲಿ ದಾಖಲೆ ಸೃಷ್ಟಿಸಿ, ಕಬಳಿಸಿರುವ ಪ್ರಕರಣಗಳನ್ನು ಈಗಾಗಲೇ ದಾಖಲೆಗಳ ಸಹಿತ ಬಯಲಿಗೆಳೆದಿದ್ದೇನೆ. ಹುಣಸಮಾರನಹಳ್ಳಿ ಸಮೀಪದ ಕೊಡಗಲಹಟ್ಟಿ ಗ್ರಾಮದಲ್ಲಿ ಅಂದಾಜು 600 ಕೋಟಿ ರೂ.ಗೂ ಹೆಚ್ಚು ಮೌಲ್ಯದ 22.30 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತನ್ನು ಕಬಳಿಸಿದ್ದ ಭೂ ಹಗರಣಕ್ಕೆ ಸಂಬಂಧಿಸಿ ನಾನು ನೀಡಿದ್ದ ದಾಖಲೆ ಸಹಿತ ದೂರನ್ನು ಆಧರಿಸಿ, ಜಿಲ್ಲಾಡಳಿತವು ಸದರಿ ಸ್ವತ್ತನ್ನು 2016ರಲ್ಲೇ ವಶಕ್ಕೆ ಪಡೆದುಕೊಂಡಿದೆ ಎಂಬುದನ್ನು ಸಚಿವರು ಮರೆತಂತಿದೆ ಎಂದು ಎನ್.ಆರ್. ರಮೇಶ್ ಕುಟುಕಿದ್ದಾರೆ.
ಸರ್ಕಾರಿ ಸ್ವತ್ತುಗಳನ್ನು ಕಬಳಿಸಿರುವ ಸರ್ಕಾರಿ ನೆಲಗಳ್ಳರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲು ಸಚಿವರು ಮುಂದಾಗುತ್ತಿಲ್ಲವೇಕೆ? ಅಂತಹ ಸ್ವತ್ತುಗಳನ್ನು ಮರಳಿ ಸರ್ಕಾರದ ವಶಕ್ಕೆ ವಾಪಸ್ ಪಡೆಯುವ ಯಾವುದೇ ಪ್ರಯತ್ನವನ್ನು ಕೃಷ್ಣಬೈರೇಗೌಡರು ಮಾಡುತ್ತಿಲ್ಲವೇಕೆ ಎಂದು ರಮೇಶ್ ಪ್ರಶ್ನಿಸಿದ್ದಾರೆ.