ರಾಜ್ಯದಲ್ಲಿ ಜಪಾನ್ ಮಾಡೆಲ್ ಅನುಷ್ಠಾನ

ಟೊಯೊಟೋ ಕವಾಸಕಿ ಸೇರಿ ಜಪಾನ್‌ನ ಪ್ರಮುಖ ಕೈಗಾರಿಕೆ ಘಟಕಗಳನ್ನುವೀಕ್ಷಿಸಿ ಕರ್ನಾಟಕದಲ್ಲಿ ಬೆಂಗಳೂರಿನಾಚೆಗೂ ಕೈಗಾರಿಕೆಗಳ ಸ್ಥಾಪನೆಗೆ ಆಹ್ವಾನ ನೀಡಿ ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಬಂಡವಾಳ ಹೂಡಿಕೆ ಆಕರ್ಷಿಸಲು ಜಪಾನ್​ಗೆ  ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ , ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಅಲ್ಲಿನ  ಅಧಿಕಾರಿಗಳ ತಂಡದ ಜತೆ.
ಬಂಡವಾಳ ಹೂಡಿಕೆ ಆಕರ್ಷಿಸಲು ಜಪಾನ್​ಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ , ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಅಲ್ಲಿನ ಅಧಿಕಾರಿಗಳ ತಂಡದ ಜತೆ.
Published on: 

ಬೆಂಗಳೂರು: ನಗರಸಾರಿಗೆ, ನಗರಾಭಿವೃದ್ಧಿ, ಕಸ ವಿಲೇವಾರಿ ಹಾಗೂ ಕೈಗಾರಿಕೆ ಕ್ಷೇತ್ರಗಳಲ್ಲಿ ಜಪಾನ್ ಹೊಂದಿರುವ ಉತ್ತಮ ವ್ಯವಸ್ಥೆಗಳನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಪಾನ್ ಪ್ರವಾಸದ ವಿವರಗಳನ್ನು ಹಂಚಿಕೊಂಡರು.

ಟೊಯೊಟೋ ಕವಾಸಕಿ ಸೇರಿ ಜಪಾನ್‌ನ ಪ್ರಮುಖ ಕೈಗಾರಿಕೆ ಘಟಕಗಳನ್ನುವೀಕ್ಷಿಸಿ ಕರ್ನಾಟಕದಲ್ಲಿ ಬೆಂಗಳೂರಿನಾಚೆಗೂ ಕೈಗಾರಿಕೆಗಳ ಸ್ಥಾಪನೆಗೆ ಆಹ್ವಾನ ನೀಡಿ ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ ಎಂದರು.

ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಜಪಾನಿನಲ್ಲಿ ಹಲವು ನಿಯೋಗಗಳ ಜತೆ ಮಾತುಕತೆ ನಡೆಸಿದ್ದು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರಿನಾಚೆಗೂ ಗ್ರೀನ್ ಫೀಲ್ಡ್ ಯೋಜನೆ ವಿಸ್ತರಿಸುವ ಆಶಯವಿದೆ ಎಂದರು.

ಜಪಾನಿನಲ್ಲಿ ಹೊಸ ನಗರಗಳ ನಿರ್ಮಾಣ, ಟೌನ್‌ಶಿಪ್, ವಾಣಿಜ್ಯ ಚಟುವಟಿಕೆಗಳ ವಿಸ್ತರಣೆ ಬಗ್ಗೆ ಪರಿಶೀಲಿಸಿದ್ದೇವೆ. ಅಲ್ಲಿ ತ್ಯಾಜ್ಯ ವಿಲೇವಾರಿ ಮೂಲಕ ಕನಿಷ್ಟ 24 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು ರಾಜ್ಯದ ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಮೈಸೂರಿನಂತಹ ನಗರಗಳಲ್ಲೂ ಇಂತಹ ವ್ಯವಸ್ಥೆ ಜಾರಿಗೆ ಪರಿಶೀಲಿಸಲು ಅವರನ್ನು ಆಹ್ವಾನಿಸಿದ್ದೇನೆ ಎಂದರು.

ಜಪಾನ್ ನಗರ ಸಾರಿಗೆ ವ್ಯವಸ್ಥೆಗೆ ಗರಿಷ್ಠ ಪ್ರಮಾಣದಲ್ಲಿ ಮೆಟ್ರೋ ಬಳಕೆ ಆಗುತ್ತಿದೆ. ಅಲ್ಲಿನ ಮೆಟ್ರೋ ನಿಲ್ದಾಣಗಳು ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ರೈಲು ನಿಲ್ದಾಣಗಳು ವಿಮಾನ ನಿಲ್ದಾಣಕ್ಕಿಂತ ಚೆನ್ನಾಗಿವೆ. ಸಮಯ ಪರಿಪಾಲನೆ, ಸ್ವಚ್ಛತೆಗೆ ಮಾದರಿ ಆಗಿವೆ ಎಂದು ಶ್ಲಾಘಿಸಿದರು.

ಹೈಬ್ರಿಡ್ ಮಾದರಿ ಕಾರು ಉತ್ಪಾದನೆ

ಟೋಕಿಯೋ ಒಲಿಂಪಿಕ್ಸ್ ವೇಳೆ ಟ್ಯಾಕ್ಸಿ ಮಾದರಿಯ ಹೈಬ್ರಿಡ್ ಕಾರು ಬಿಡುಗಡೆ ಆಗಿತ್ತು. ರಾಜ್ಯದಲ್ಲಿ ಅದೇ ಮಾದರಿಯ ಕಾರು ಉತ್ಪಾದಿಸಲು ಆಹ್ವಾನ ನೀಡಿದ್ದೇವೆ. ಟ್ಯಾಕ್ಸಿ ಕಾರು ನಮ್ಮ ರಾಜ್ಯಕ್ಕೆ ಹೆಚ್ಚು ಅನುಕೂಲ ಆಗಬಹುದೆಂಬ ನಿರೀಕ್ಷೆ ಇದೆ ಎಂದು ಸಿಎಂ ತಿಳಿಸಿದರು.

ಈ ಟ್ಯಾಕ್ಸಿ ಕಾರಿನಿಂದ ಸ್ಥಳೀಯ ಆಟೋಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ಆಟೋ ಓಡಿಸಿ ಜೀವನ ನಿರ್ವಹಣೆ ಮಾಡುವ ಕುಟುಂಬಗಳಿಗೆ ಯಾವುದೇ ತೊಂದರೆ ಆಗದು ಎಂದರು.

ಟ್ಯಾಕ್ಸಿ ವಿಶೇಷ:

ಹೈಬ್ರಿಡ್ ಮತ್ತು ಎಲ್‌ಪಿಜಿ ತಂತ್ರಜ್ಞಾನದ ಇಂಧನ ವ್ಯವಸ್ಥೆ ಹೊಂದಿರುವ ಈ ಟ್ಯಾಕ್ಸಿ ಕಡಿಮೆ ಇಂಧನ ವ್ಯಯಿಸಿ ಹೆಚ್ಚಿನ ಮೈಲೇಜ್ ನೀಡುತ್ತದೆ.

ಎತ್ತರದ ಛಾವಣಿ, ದೊಡ್ಡ ಕಿಟಕಿ, ಪವರ್ ಸ್ಲೈಡಿಂಗ್ ಹಿಂಬದಿಯ ಬಾಗಿಲು ಹೊಂದಿದ್ದು ಹತ್ತಲು, ಇಳಿಯಲು ಸುಲಭವಾಗಿದೆ.

ಹಿಂಬದಿ ಸೀಟುಗಳಲ್ಲಿ ಹವಾನಿಯಂತ್ರಣ ಮತ್ತು ಸೀಟ್ ಹೀಟರ್ ನಿಯಂತ್ರಣ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳಿವೆ ಎಂದು ಸಿಎಂ ಮಾಹಿತಿ ನೀಡಿದರು.

ತುಮಕೂರಿಗೆ ಮೆಟ್ರೋ

ಪಿಪಿಪಿ ಮಾದರಿಯಲ್ಲಿ ತುಮಕೂರಿಗೆ ಮೆಟ್ರೋ ವಿಸ್ತರಿಸುವ ಪ್ರಸ್ತಾಪವಿದೆ. ಮೆಟ್ರೋದ ಜತೆಗೆ ನಗರಗಳು ಅಭಿವೃದ್ಧಿ ಹೊಂದುತ್ತವೆ. ಜನರ ಅನುಕೂಲ ಮುಖ್ಯ. ರಾಜ್ಯ ಸರ್ಕಾರ ಯಾವುದೇ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಮೆಟ್ರೋ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಮುಖ್ಯಾಂಶಗಳು

ಉತ್ತಮ ವ್ಯವಸ್ಥೆ ಅಳವಡಿಕೆಗೆ ಚಿಂತನೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ

ಹಾರೋಹಳ್ಳಿಯಲ್ಲಿ 600 ಜನರಿಗೆ ಉದ್ಯೋಗ

ಟೊಯೋಟಾ ಘಟಕ ವಿಸ್ತರಣೆಗೆ ನೆರವು

ಬಿಯಾಂಡ್ ಬೆಂಗಳೂರು ಅಭಿವೃದ್ಧಿಗೆ ಒತ್ತು