

ಬೆಂಗಳೂರು: ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ ಪ್ರಕರಣ ಕಾಟನ್‌ಪೇಟೆಯ ಲಾಡ್ಜ್‌ವೊಂದರಲ್ಲಿ ಶುಕ್ರವಾರ ನಡೆದಿದೆ.
ಕೇರಳಂ ಮೂಲದ ಗಂಗಾ (22) ಮೃತ ಯುವತಿ. ಈಕೆಗೆ ಕೊಲೆ ಮಾಡಿದ ಆರೋಪಿ ಗೋಕುಲ್ ಕೃಷ್ಣ (23) ಎಂಬಾತನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ನರ್ಸಿಂಗ್ ಕೋರ್ಸ್ ಅನ್ನು ಕೇರಳದಲ್ಲಿ ಮುಗಿಸಿ ಕೆಲಸಕ್ಕಾಗಿ ಗುರುವಾರ (ನ.26) ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಕಾಟನ್‌ಪೇಟೆ ಮಸ್ತಾನ್ ದರ್ಗಾ ಸಮೀಪದ ರೆಜೆನ್ಸಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಒಂದೇ ಕೊಠಡಿಯಲ್ಲಿ ತಂಗಿದ್ದ ಇಬ್ಬರೂ ರಾತ್ರಿ ಊಟ ಮುಗಿಸಿ, ಮಾತನಾಡುತ್ತಿದ್ದ ವೇಳೆ ಪ್ರೇಯಸಿ ಗಂಗಾ ಜತೆಗೆ ಮತ್ತೊಬ್ಬ ಯುವಕನ ಸಂಪರ್ಕವಿರುವ ವಿಚಾರ ತಿಳಿದಿದ್ದರಿಂದ ಇಬ್ಬರ ನಡುವೆ ಜಗಳ ಸಂಭವಿಸಿದೆ. ಇದು ವಿಕೋಪಕ್ಕೆ ತಿರುಗಿದಾಗ ಚಾಕುವಿನಿಂದ ಹೊಟ್ಟೆಗೆ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಲಾಡ್ಜ್‌ನ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಗ ಕಾಟನ್‌ಪೇಟೆ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ರಕ್ತದ ಮಡುವಿನಲ್ಲಿ ಗಂಗಾ ಬಿದ್ದಿದ್ದಳು. ಬೆಡ್ ಸಂಪೂರ್ಣ ರಕ್ತಮಯವಾಗಿತ್ತು. ಅಲ್ಲಿದ್ದ ಮೆಟ್ಟಿಲುಗಳ ಮೇಲೆ ರಕ್ತ ಸೋರಾಡಿರುವುದು ಕಂಡು ಬಂದಿದೆ.
ಶ್ವಾನದಳ ಹಾಗೂ ವಿಧಿವಿಜ್ಞಾನ ತಂಡದವರು ಘಟನಾ ಸ್ಥಳಕ್ಕೆ ದಾವಿಸಿ ಸಾಕ್ಷ್ಯ ಸಂಗ್ರಹಿಸಿದರು. ಮೃತ ಯುವತಿ ಪಾಲಕರು, ಶುಕ್ರವಾರ ಸಂಜೆ 6 ಗಂಟೆಗೆ ಠಾಣೆಗೆ ದೂರು ಸಲ್ಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಯುವತಿಯೊಂದಿಗೆ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಲಾಡ್ಜ್ ಬುಕ್ ಮಾಡಿದ್ದ. ಗಲಾಟೆಗೆ ಮುನ್ನವೇ ಚಾಕು ತಂದಿಟ್ಟುಕೊಂಡಿದ್ದ ಆರೋಪಿಯ ನಡೆ ಗಮನಿಸಿದರೆ ಕೊಲೆ ಮಾಡಲು ಮೊದಲೇ ಸಂಚು ರೂಪಿಸಿದ್ದ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳಂನಲ್ಲಿ ಇಬ್ಬರು ನರ್ಸಿಂಗ್ ಓದುತ್ತಿದ್ದಾಗ ಸ್ನೇಹಿತರಾಗಿದ್ದರು. ಆರೋಪಿಗೆ ಯುವತಿ ಜ್ಯೂನಿಯರ್ ಆಗಿದ್ದಳು. ಕೋರ್ಸ್ ಮುಗಿದ ಬಳಿಕ ಕೆಲಸಕ್ಕಾಗಿ ಇಬ್ಬರು ಬೆಂಗಳೂರಿಗೆ ಬಂದಾಗ ಆಕೆಯ ಸ್ನೇಹಿತನೇ ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.
- ಲಕ್ಷ್ಮಿ ಗಣೇಶ್ ಡಿಸಿಪಿ, ಗಾಂಧಿನಗರ