

ಬೆಂಗಳೂರು: ಅನ್ನದಾತನಿಗೆ ಹೊಲವೇ ಬದುಕು. ಆದರೆ, ಆ ಹೊಲದ ದಾಖಲೆಗಾಗಿ ವರ್ಷಗಟ್ಟಲೆ ಅಲೆದಾಡಿಸುವ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯ ಕುರಿತು ತರಾಟೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಆರ್. ಅಶೋಕ್, ರೈತರ ಬಾಕಿ ಅರ್ಜಿಗಳಿಗೆ ಕಾಲಮಿತಿ ನಿಗದಿಪಡಿಸಿ, ಪಾರದರ್ಶಕವಾಗಿ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
‘ಪೋಡಿ, ಹದ್ದುಬಸ್ತು ರೈತ ಸುಸ್ತು’ ಶೀರ್ಷಿಕೆಯಡಿ ವಿಜಯವಾಣಿ ಮುಖಪುಟದಲ್ಲಿ ಭಾನುವಾರ ಪ್ರಕಟವಾಗಿದ್ದ ವಿಶೇಷ ವರದಿಯ ಪ್ರತಿಯನ್ನು ಆಶೋಕ್, ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರಕಟಿಸಿ ಆಡಳಿತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ 1.66 ಲಕ್ಷ ಪೋಡಿ, 2.07 ಲಕ್ಷ ಹದ್ದುಬಸ್ತು ಹಾಗೂ 5,525 ಭೂ ದಾಖಲೆ ತಿದ್ದುಪಡಿ ಅರ್ಜಿಗಳು ಬಾಕಿ ಉಳಿದಿರುವುದು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ದೋರಣೆಗೆ ಸ್ಪಷ್ಟ ಸಾಕ್ಷಿಯಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕಡತ ಬಾಕಿ ಇಡುವುದು, ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದು ಮತ್ತು ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡುವುದು ಇದು ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತ ಶೈಲಿಯಾಗಿದೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ರೈತ ತನ್ನ ಜಮೀನಿನ ಗಡಿ ಗುರುತಿಸಿಕೊಳ್ಳಲು, ಭೂಮಿಯ ದಾಖಲೆ ಸರಿಪಡಿಸಿಕೊಳ್ಳಲು, ಆಸ್ತಿಯ ಹಕ್ಕು ಸ್ಪಷ್ಟಪಡಿಸಿಕೊಳ್ಳಲು ವರ್ಷಗಟ್ಟಲೆ ಸರ್ಕಾರಿ ಕಚೇರಿಗಳ ಬಾಗಿಲು ತಟ್ಟಬೇಕಾದ ಪರಿಸ್ಥಿತಿ ತಂದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ತಾಂತ್ರಿಕ ನೆಪ, ಅಧಿಕಾರಿಗಳ ವಿಳಂಬ, ಮಧ್ಯವರ್ತಿಗಳ ಹಾವಳಿ ಇವೆಲ್ಲದರ ನಡುವೆ ಅನ್ನದಾತ ಮಾತ್ರ ಹೈರಾಣಾಗುತ್ತಿದ್ದಾನೆ. ಇದು ರಾಜ್ಯ ಸರ್ಕಾರಕ್ಕೆ ರೈತರ ಕುರಿತು ಇರುವ ಕಾಳಜಿ ತೋರಿಸುತ್ತದೆ. ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಮತ್ತು ಕಂದಾಯ ಸಚಿವ ಜಿ.ಪರಮೇಶ್ವರ ಅನ್ನದಾತನನ್ನು ಕಚೇರಿಗಳ ಸುತ್ತ ಸುತ್ತಿಸುವುದನ್ನು ಇನ್ನಾದರೂ ನಿಲ್ಲಿಸಬೇಕು, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ರೈತರ ಬಾಕಿ ಅರ್ಜಿಗಳ ವಿಲೇಗೆ ಕ್ರಮತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.