ಕೈದಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಡಿಐಜಿ

ವಿಡಿಯೋ ಕಾಲ್ ದೃಶ್ಯ FSLಗೆ ರವಾನೆ, ಪರಪ್ಪನ ಅಗ್ರಹಾರ ಪೊಲೀಸರಿಂದ ತನಿಖೆ ಚುರುಕು
DIG Somashekhar
DIG Somashekhar
Published on: 

ಬೆಂಗಳೂರು: ಸುಪ್ರೀಂ ಕೋರ್ಟ್ ನಕಲಿ ಆದೇಶ ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಬಿಡುಗಡೆಗೆ ಸಹಕರಿಸಿದ್ದ ಆರೋಪಿ ಡಿಐಜಿ ಸೋಮಶೇಖರ್, ಕೈದಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಎಂಬ ಮಾಹಿತಿ ಕೇಳಿ ಬಂದಿದೆ.

2018ರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕನಾಗಿದ್ದ ಡಿಐಜಿ ಸೋಮಶೇಖರ್, ಕೈದಿ ಪತ್ನಿ ಜತೆಗೆ ದೈಹಿಕ ಸಂಪರ್ಕವಿಟ್ಟುಕೊಂಡಿದ್ದ. ಇದಕ್ಕೆ ಸಂಬಂಧಿಸಿದಂತೆ ಕೈದಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್ ಮಾಡಿದ್ದ ದೃಶ್ಯದ ಸುರುಳಿ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಡಿಐಜಿ, ಕೈದಿ ಪತ್ನಿಗೆ ವಿವಸಗೊಳ್ಳುವಂತೆ ಮನವಿ ಮಾಡಿದ್ದ ಎನ್ನಲಾಗಿದೆ.

ತನಿಖಾಧಿಕಾರಿಗಳು, ಆ ವಿಡಿಯೋವನ್ನು ಎಫ್‌ಎಸ್‌ಎಲ್ಗೆ ರವಾನಿಸಿದ್ದು, ವಿಡಿಯೋ ಅಸಲಿಯೋ, ನಕಲಿಯೋ, ಎಡಿಟ್ ಮಾಡಲಾಗಿದೆಯೋ ಎಂಬುದನ್ನು ಪರಿಶೀಲಿಸುತ್ತಿದ್ದು, ಎಫ್‌ಎಸ್‌ಎಲ್ ವರದಿ ಬಂದ ನಂತರ ಡಿಐಜಿ ಅವರ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸದ್ಯ ಪೊಲೀಸರು ಜೈಲು ದಾಖಲೆಗಳು, ನಕಲಿ ಆದೇಶದ ಪ್ರತಿಗಳು, ಪತ್ರದ ಮೂಲ ಮತ್ತು ವಿಡಿಯೋ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸುತ್ತಿದ್ದಾರೆ.

ಕೈದಿ ಪತ್ನಿಯಿಂದಲೇ ಅನಾಮಧೇಯ ಪತ್ರ:

ನಕಲಿ ಆದೇಶ ಹುಟ್ಟಿಕೊಂಡಿದ್ದು ಹೇಗೆ, ಅದನ್ನು ಯಾರು ತಯಾರಿಸಿದರು, ಜೈಲು ಅಧಿಕಾರಿಗಳಿಗೆ ಹೇಗೆ ತಲುಪಿತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಅನಾಮಧೇಯ ಪತ್ರ ಬರೆದವರಾರು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ಸಂಬಂಧ ಪತ್ರದಲ್ಲಿದ್ದ ಮಾಹಿತಿ ಮತ್ತು ಅದರ ಭಾಷಾಶೈಲಿ ಪರಿಶೀಲಿಸಿ ಕೈದಿ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪತ್ರದ ಬರವಣಿಗೆ, ಬಳಸಲಾದ ಪದಗಳು ಮತ್ತು ಪತ್ರದಲ್ಲಿ ನೀಡಲಾದ ಖಾಸಗಿ ಮಾಹಿತಿಗಳನ್ನು ವಿಶ್ಲೇಷಿಸಿದಾಗ, ಅದು ಹೊರಗಿನ ವ್ಯಕ್ತಿ ಬರೆದಿದ್ದಲ್ಲ, ಬದಲಿಗೆ ಶಂಕರ್ ಕುಟುಂಬಕ್ಕೆ ನಿಕಟ ಸಂಪರ್ಕವಿರುವ ವ್ಯಕ್ತಿಯಿಂದ ಬರೆಯಲ್ಪಟ್ಟಿರಬಹುದು ಎಂಬ ತೀರ್ಮಾನಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ. ಅದರಲ್ಲೂ ಕೈದಿ ಶಂಕರ್ ಪತ್ನಿಯೇ ಈ ಪತ್ರ ಬರೆದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೈದಿ ಶಂಕರ್ ಮತ್ತೊಂದು ಮದುವೆ ಆಗಿದ್ದ:

ಕೈದಿ ಶಂಕರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಬೇರೊಬ್ಬರ ಜತೆಗೆ ಮದುವೆ ಆಗಿದ್ದ. ಈ ವಿಚಾರದಲ್ಲಿ ಶಂಕರ್ ಜತೆಗೆ ಪತ್ನಿ ಜಗಳ ಮಾಡುತ್ತಿದ್ದಳು. ತನ್ನನ್ನು ತೊರೆದು ಮತ್ತೊಬ್ಬಳೊಂದಿಗೆ ಪತಿ ಜೀವನ ನಡೆಸುತ್ತಿದ್ದಾನೆ ಎಂದು ನೊಂದು ಕಾರಾಗೃಹ ಇಲಾಖೆಗೆ ಪತ್ರ ಬರೆದಿದ್ದಳು ಎನ್ನಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿಯ ಪಾತ್ರವಿದೆಯೇ, ಜೈಲು ಅಧಿಕಾರಿಗಳ ಅಥವಾ ಬೇರೆ ಅಧಿಕಾರಿಗಳ ಸಹಕಾರವಿದೆಯೇ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೆಲ ಪ್ರಮುಖ ವಿಚಾರಣೆಗಳು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net