ಬೆಂಗಳೂರು: ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸುವ ಜತೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ರಾಜಿನಾಮೆಗೆ ಆಗ್ರಹಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದವು.
ನಗರ ಫ್ರೀಡಂ ಪಾರ್ಕಿಗೆ ಜಮಾಯಿಸಿದ ಅಖಿಲ ಭಾರತ ವಿದ್ಯಾರ್ಥಿ ಸಂಘ, ಭಾರತ ವಿದ್ಯಾರ್ಥಿ ಒಕ್ಕೂಟ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಮತ್ತು ಭಾರತೀಯ ವಿದ್ಯಾರ್ಥಿ ಒಕ್ಕೂಟದ ನೂರಾರು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ವಿದ್ಯಾರ್ಥಿ ನಾಯಕರೊಬ್ಬರು ಮಾತನಾಡಿ, ಮತದಾರರ ಪಟ್ಟಿಯಲ್ಲಿ ‘ಅನರ್ಹ, ಸ್ಥಳಾಂತರಗೊಂಡ ಅಥವಾ ಮೃತಪಟ್ಟಿದ್ದಾರೆ’ ಎಂಬ ನೆಪ ಒಡ್ಡಿ ಕೈಬಿಡಲಾಗಿರುವ 1.07 ಕೋಟಿ ಮತದಾರರ ಹೆಸರನ್ನು ಮರು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದ್ದರು.
ಫ್ರೀಡಂ ಪಾರ್ಕ್‌ನಿಂದ 100 ಮೀಟರ್ ದೂರದಲ್ಲಿರುವ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಯವರ ಕಚೇರಿಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ರಸ್ತೆ ಗಿಳಿಯಲು ಸಿದ್ಧತೆ ನಡೆಸಿದ್ದರು. ಆದರೆ, ಮೆರವಣಿಗೆ ಆರಂಭವಾಗುವ ಮುನ್ನವೇ ಪೊಲೀಸರು ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ವಿದ್ಯಾರ್ಥಿಗಳನ್ನು ತಡೆಯುವ ಜತೆಗೆ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದಿದ್ದು, ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಲಾಯಿತು.
‘ನಾವು ಫ್ರೀಡಂ ಪಾರ್ಕ್‌ನ ಆವರಣದಲ್ಲೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಬ್ಯಾರಿಕೇಡ್‌ಗಳನ್ನೂ ದಾಟಿರಲಿಲ್ಲ. ಆದರೆ, ಪೊಲೀಸರು ಏಕಾಏಕಿ ನಮ್ಮನ್ನು ವಶಕ್ಕೆ ಪಡೆದು ವಿವಿಧ ಬಸ್‌ಗಳಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರೊಬ್ಬರು ಆರೋಪಿಸಿದ್ದಾರೆ.
'ನಾವು ಕೇವಲ ಪ್ರತಿಭಟನೆಗೆ ಮಾತ್ರ ಅನುಮತಿ ನೀಡಿದ್ದೇವು. ಚುನಾವಣೆ ಕಚೇರಿಗೆ ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ.
-ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಆಯುಕ್ತ