

ಬೆಂಗಳೂರು: ಚೀನಾದ ಗುಯಿಝೌ ವೈದ್ಯಕೀಯ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ 15 ನುರಿತ ತಜ್ಞರ ನಿಯೋಗವು ಗುರುವಾರ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಪಡೆಯಿತು.
ಈ ವೇಳೆ ಸಂಸ್ಥೆಯಲ್ಲಿ ಅತೀ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಿಯೋಗವು, ಹೊರ ರೋಗಿಗಳ ವಿಭಾಗ, ಸಾಮಾನ್ಯ ವಾರ್ಡ್, ತುರ್ತು ನಿಗಾ ಘಟಕ, ಮಕ್ಕಳ ತುರ್ತು ನಿಗಾ ವಿಭಾಗ, ಕ್ಯಾತ್ಲ್ಯಾಬ್ ಭೇಟಿ ನೀಡಿ ಮಾಹಿತಿ ಪಡೆಯಿತು. ಇದೇ ವೇಳೆ ಶಸಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದ ನಿಯೋಗ ಸಂಸ್ಥೆಗೆ ಕಾರ್ಯ ವೈಖರಿ ಬಗಗೆ ಹರ್ಷ ವ್ಯಕ್ತಪಡಿಸಿದೆ.
ಸಾರ್ವಜನಿಕ ವೈದ್ಯಕೀಯ ಸೇವೆಗಳು ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಸಂರಕ್ಷಣೆ ಮತ್ತು ಪರಂಪರೆಯನ್ನು ಮುಂದುವರೆಸುವಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ವೈದ್ಯಕೀಯ ಕ್ಷೇತ್ರದಲ್ಲಿ ಪರಸ್ಪರ ವಿನಿಯಮ ಮತ್ತು ಸಹಕಾರವನ್ನು ಹೆಚ್ಚಿಸಬೇಕಿದೆ. ಪರಸ್ಪರ ಅನುಭವನಗಳನ್ನು ಹಂಚಿಕೊಳ್ಳುವ ಮೂಲಕ ಎರಡೂ ದೇಶಗಳ ಜನರ ಆರೋಗ್ಯ ಮತ್ತು ಜೀವನ ಮಟ್ಟದ ಸುಧಾರಿಸಬೇಕು ಎಂದು ನಿಯೋಗ ಅಭಿಪ್ರಾಯ ತಿಳಿಸಿದೆ.
ಈ ಕುರಿತು ಸಂಸ್ಥೆ ನಿರ್ದೇಶಕ ಡಾ. ಬಿ. ದಿನೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಯದೇವ ಆಸ್ಪತ್ರೆಯ ವೈದ್ಯರು ಚೀನಾಕ್ಕೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ಚೀನಾದ ವೈದ್ಯರ ನಿಯೋಗ ಆಹ್ವಾನ ನೀಡಿದೆ. ಆ ನಿಟ್ಟಿನಲ್ಲಿ ಸಂಸ್ಥೆಯ ವೈದ್ಯರ ತಂಡವನ್ನು ಚೀನಾಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.