

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ 319 ಹುದ್ದೆಗಳ ನೇಮಕಾತಿಗೆ ಯಶಸ್ವಿಯಾಗಿ ಪೂರ್ವಭಾವಿ ಪರೀಕ್ಷೆ ನಡೆಸಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) 1:15 ಅನುಪಾತದಲ್ಲಿ ಲಿತಾಂಶ ಪ್ರಕಟಿಸಲು ಸಜ್ಜಾಗಿದೆ. ಆದರೆ, ಕೃಪಾಂಕ ಮತ್ತು ಪರಿಷ್ಕೃತ ಕೀ ಉತ್ತರ ಪ್ರಕಟಣೆಯಲ್ಲಿ ಗೊಂದಲ ಮುಂದುವರಿದಿದೆ.
202 ಗ್ರೂಪ್ ಬಿ ಹಾಗೂ 117 ಗ್ರೂಪ್ ಎ ಹುದ್ದೆಗಳು ಸೇರಿ 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ನ.15ರಂದು ಲಿಖಿತ ಪರೀಕ್ಷೆ ನಡೆಸಿದ್ದ ಕೆಪಿಎಸ್ಸಿ 16ಕ್ಕೆ ಕೀ ಉತ್ತರ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿತ್ತು. 22ಕ್ಕೆ ಪರಿಷ್ಕೃತ ಕೀ ಉತ್ತರ ಪ್ರಕಟಿಸಿದೆ. ಇದಲ್ಲದೆ, ಮೊದಲ ಬಾರಿಗೆ ಒಎಂಆರ್ ಶೀಟ್ ಮತ್ತು ಕೀ ಉತ್ತರ ಪ್ರಕಟಿಸಿ ಪಾರದರ್ಶಕತೆಗೆ ಸಾಕ್ಷಿಯಾಗಿದೆ. ಆದರೆ, ಕೀ ಉತ್ತರ ಪ್ರಕಟಿಸುವಾಗ ಕೆಲ ತಪ್ಪುಗಳು ಕಂಡು ಬಂದಿವೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಕೆಪಿಎಸ್ಸಿ ಪ್ರಶ್ನೆ ಸಂಖ್ಯೆ 60ರಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ 3 ಹೇಳಿಕೆಗಳನ್ನು ನೀಡಲಾಗಿತ್ತು. 1. ಯೋಜನೆಯಡಿ ಪ್ರತಿ ತಿಂಗಳು ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. 2. 2026-27ನೇ ಸಾಲಿನಲ್ಲಿ ಮಾಸಿಕ ಅಕ್ಕಿ ವಿತರಣೆಯ ಬದಲಾಗಿ ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ಇಂದಿರಾ ಫುಡ್ ಕಿಟ್ ವಿತರಿಸಲು ಸರ್ಕಾರ ಉದ್ದೇಶಿಸಿದೆ. 3. ಇಂದಿರಾ ಫುಡ್ ಕಿಟ್ ವಿತರಣೆಗೆ ವಾರ್ಷಿಕ 6,200 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈ 3 ಹೇಳಿಕೆಗಳೂ ಸರಿಯಾಗಿವೆ ಎಂಬುದು ಬಜೆಟ್ ಪುಸ್ತಕದ ಆಧಾರದ ಮೇಲೆ ಸ್ಪಷ್ಟವಾಗುತ್ತದೆ. ಕೆಪಿಎಸ್ಸಿ ತನ್ನ ಕೀ ಉತ್ತದಲ್ಲಿ ಮೊದಲನೇ ಹೇಳಿಕೆಯನ್ನು ತಪ್ಪು ಎಂದು ಪರಿಗಣಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಅಭ್ಯರ್ಥಿಗಳು ಕೆಪಿಎಸ್ಸಿಗೂ ದೂರು ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ನಲ್ಲಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಕೆಪಿಎಸ್ಸಿ ಪರೀಕ್ಷೆಯ ಉತ್ತರ ಕೀಲಿಯಲ್ಲಿ ಈ ಹೇಳಿಕೆಯನ್ನು ತಪ್ಪು ಎಂದು ಪರಿಗಣಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಬಜೆಟ್ ಪುಸ್ತಕದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಭಾಗದ 242ನೇ ಪ್ಯಾರಾದಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 4.54 ಕೋಟಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ಯಶಸ್ವಿಯಾಗಿ ವಿತರಿಸಲಾಗುತ್ತಿದೆ. ಬಡವರ ಹಸಿವನ್ನು ನೀಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಕಳೆದ 3 ವರ್ಷಗಳಲ್ಲಿ ಈ ಯೋಜನೆಗಾಗಿ 17,167 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದೀಗ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯಂತಹ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒಳಗೊಂಡ ’ಇಂದಿರಾ ಫುಡ್ ಕಿಟ್’ ವಿತರಿಸಲು ಸರ್ಕಾರ ಉದ್ದೇಶಿಸಿದೆ. ಈ ಯೋಜನೆಗಾಗಿ 2026-27ನೇ ಸಾಲಿನಲ್ಲಿ 6,200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಕೆಪಿಎಸ್ಸಿ ಕೀ ಉತ್ತರದಲ್ಲಿ ಇಲ್ಲವೆಂದು ತೀರ್ಮಾನಕ್ಕೆ ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಅಭ್ಯರ್ಥಿಗಳ ಆರೋಪವಾಗಿದೆ.
ರಾಜ್ಯ ಸರ್ಕಾರದ ಅಧಿಕೃತ ಬಜೆಟ್ ದಾಖಲೆಯಲ್ಲೇ ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಣೆಯ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಇಷ್ಟಿದ್ದರೂ ಕೆಪಿಎಸ್ಸಿ ಮೊದಲನೇ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಸಿಎಂಗೆ ಅಭ್ಯರ್ಥಿಗಳ ಮನವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳು ಈ ಬಗ್ಗೆ ಟ್ಯಾಗ್ ಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಅಧಿಕೃತ ಬಜೆಟ್ ದಾಖಲೆಯಲ್ಲಿ ಇರುವ ಮಾಹಿತಿಗೆ ಅನುಗುಣವಾಗಿ ಕೀ ಉತ್ತರ ಪರಿಶೀಲಿಸಿ, ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಈ ಹಂತದಲ್ಲಿ ಕೆಪಿಎಸ್ಸಿ ಪರಿಗಣಿಸಲು ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಹೇಳಿದೆ.