ಹಳ್ಳಿಗೂ ಬಂದ ಬೈಪಾಸ್ ರಸ್ತೆಗಳು

ಬೆಂಗಳೂರು ನಗರ ಜಿಲ್ಲೆಯ ಗ್ರಾಮಗಳಿಗೆ ಗಡಿ ಗುರುತು, ಜಿಬಿಎ ಮಾಸ್ಟರ್‌ಪ್ಲ್ಯಾನ್ ಒಳಗೆ ಇಡೀ ಜಿಲ್ಲೆ
ಹಳ್ಳಿಗೂ ಬಂದ ಬೈಪಾಸ್ ರಸ್ತೆಗಳು
reporting
Published on: 

ಬೆಂಗಳೂರು: ಹೊಸ ರಸ್ತೆ ಅಥವಾ ರಸ್ತೆ ಅಗಲೀಕರಣ ಮಾಡುವಾಗ ನಗರ, ಪಟ್ಟಣಗಳು ಅಡ್ಡಲಾಗಿ ಇದ್ದಾಗ ಬೈಪಾಸ್ ರಸ್ತೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಇದೀಗ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಹಳ್ಳಿಗಳಿಗೂ ಬೈಪಾಸ್ ರಸ್ತೆ ಮಾಡಲು ಸರ್ಕಾರ ಮಾಸ್ಟರ್‌ಪ್ಲ್ಯಾನ್ ಮಾಡಿದೆ.

ಬೆಂಗಳೂರು ನಗರ ಜಿಲ್ಲೆಯ ಒಳಗಿನ ಪ್ರದೇಶಗಳ ಭವಿಷ್ಯದ ದೃಷ್ಟಿಯಿಂದ ಹೊಸ ರಸ್ತೆ ಜಾಲ (ರೋಡ್ ಗ್ರಿಡ್) ನಿರ್ಮಾಣ ಹಾಗೂ ಸಮರ್ಪಕ ರಸ್ತೆ ಕಲ್ಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧಾರ ಮಾಡಿದೆ. ಆದರಿಂದ ಜಿಬಿಎ, ತನ್ನ ವ್ಯಾಪ್ತಿಯ ಹೊರಗಿರುವ ಬೆಂಗಳೂರು ನಗರ ಜಿಲ್ಲೆ ಸಂಪೂರ್ಣ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಸೂಚನೆ ಹೊರಡಿಸಿದೆ.

ಕಳೆದ 25 ವರ್ಷಗಳಿಂದ ಬೆಂಗಳೂರು ನಗರ ಸೂಕ್ತ ಪೂರ್ವಯೋಜನೆ ಹಾಗೂ ಮುಂಜಾಗ್ರತಾ ತಯಾರಿ ಇಲ್ಲದೆ ಬೆಳೆದಿದೆ. ಪರಿಣಾಮ ಸಂಚಾರ ಸಿಕ್ಕು ಹೆಚ್ಚಾಗಿದೆ. ಆದರಿಂದ ಜಿಬಿಎ ಹೊರಗಿನ ಪ್ರದೇಶಗಳಲ್ಲಿ ನಗರೀಕರಣಕ್ಕೆ ವೇಗವಾಗಿ ಒಳಪಡುತ್ತಿವೆ. ಈ ಪ್ರದೇಶಗಳು ಸದ್ಯ ಜಿಬಿಎ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ, ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿದ್ದು ಭವಿಷ್ಯದಲ್ಲಿ ನಗರದ ಭಾಗವಾಗುವ ಎಲ್ಲ ಸಾಧ್ಯತೆಗಳಿವೆ. ನಗರದ 750 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಈಗಾಗಲೇ ನಗರೀಕರಣ ವೇಗವಾಗಿದ್ದು, ಮುಂದಿನ ದಿನಗಳಲ್ಲಿ 1400 ರಿಂದ 1800 ಚದರ ಕಿ.ಮೀ.ವರೆಗೆ ವಿಸ್ತರಣೆ ಆಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯೋಜನಾಬದ್ಧ ಅಭಿವೃದ್ಧಿಯ ಭಾಗವಾಗಿ ಕಳೆದ ವಾರ ಇಡೀ ಬೆಂಗಳೂರು ನಗರ ಜಿಲ್ಲೆಯನ್ನು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಬಿಎಂಆರ್‌ಡಿಎ ಸೇರಿ ಎಲ್ಲ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹೊಸ ರಸ್ತೆಜಾಲ ಗುರುತಿಸಿದೆ. ಜಿಬಿಎ ಒಳಗೆ ಈಗಾಗಲೇ ಲೇಔಟ್‌ಗಳು ಮತ್ತು ಮನೆಗಳು ನಿರ್ಮಾಣವಾಗಿರುವುದರಿಂದ ಅಲ್ಲಿ ಹೊಸ ರಸ್ತೆಗಳನ್ನು ಗುರುತಿಸುವುದರಿಂದ ಪ್ರಯೋಜನವಿಲ್ಲ. ಈಗ ಎಲ್ಲಿ ಬೆಳವಣಿಗೆ ಆಗುತ್ತಿದೆಯೋ ಆ ಭಾಗಗಳಲ್ಲಿ, ಅಂದರೆ ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಪ್ರಮುಖ ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ, ಪೆರಿಫೆರಲ್ ರಿಂಗ್ ರೋಡ್ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಗ್ರಿಡ್ ಮಾದರಿಯಲ್ಲಿ ಸಿಡಿಪಿ ರಸ್ತೆಗಳನ್ನಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಹಳ್ಳಿಗಳ ನಡುವೆ ಹಾದು ಹೋಗುವ ರಸ್ತೆಗಳ ಅಗಲೀಕರಣಕ್ಕೂ ಸರ್ವೇ ನಡೆಸಲಾಗಿದೆ. ಬಹುತೇಕ ಗ್ರಾಮಗಳಲ್ಲಿ ರಸ್ತೆಬದಿಗೆ ಮನೆಗಳು ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ ಅಂತಹ ಹಳ್ಳಿಗಳಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸರ್ಕಾರದಿಂದ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡರೆ ಜಮೀನು ಸ್ವಾಧೀನಪಡಿಸಿಕೊಂಡು ವಾರಸುದಾರರಿಗೆ ಪರಿಹಾರ ಒದಗಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

ಹೊಸ ಅಧಿಸೂಚನೆಯಲ್ಲಿ ನೂರಾರು ರಸ್ತೆಗಳನ್ನು ಸೇರಿಸಿದ್ದು, ಜಿಲ್ಲಾ ಪಂಚಾಯತ್, ಪಿಡಬ್ಲ್ಲ್ಯುಡಿ ಹಾಗೂ ರಾಜ್ಯ ಹೆದ್ದಾರಿ ರಸ್ತೆಗಳನ್ನು ಅಗಲೀಕರಿಸಲಾಗಿದೆ. ಕೇವಲ 10 ಮೀಟರ್ ಇದ್ದ ರಸ್ತೆಗಳನ್ನು 30 ಮೀಟರ್, 45 ಮೀಟರ್‌ಗೆ ಹಾಗೂ ಕೆಲವು ರಸ್ತೆಗಳನ್ನು 90 ಮೀಟರ್‌ವರೆಗೆ ವಿಸ್ತರಿಸಿ ನೋಟಿಫೈ ಮಾಡಲಾಗಿದೆ. ಈ ರಸ್ತೆಗಳ ಸಂಪೂರ್ಣ ನಿರ್ಮಾಣಕ್ಕೆ 5-10 ವರ್ಷಗಳು ಬೇಕಾಗಬಹುದು. ಆದರೆ, ಇನ್ಮುಂದೆ ಈ ವ್ಯಾಪ್ತಿಯಲ್ಲಿ ಹೊಸ ಬಡಾವಣೆ ಅಥವಾ ಕೈಗಾರಿಕೆಗಳ ಮತ್ತಿತರ ಉದ್ದೇಶಕ್ಕೆ ಜಮೀನು ಅಭಿವೃದ್ಧಿ ಕೈಗೊಂಡರೆ ಅಂತವರು ರಸ್ತೆಗೆ ಅಗತ್ಯವಿರುವ ಜಾಗವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net