ಬೆಂಗಳೂರು: ಶೆಡ್ನ ಬಾಡಿಗೆ ಹಣ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಶುರುವಾದ ಜಗಳದಲ್ಲಿ ವಕೀಲನ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಆತನ ಹಣೆಗೆ ಗುಂಡಿಟ್ಟು ಕೊಂದ ಘಟನೆ ತಡರಾತ್ರಿ ವೈಟ್ಫೀಲ್ಡ್ನ ಪಟ್ಟಂದೂರು ಅಗ್ರಹಾರ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತ ವಕೀಲನನ್ನು ಮಂಜುನಾಥ್ (42) ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಬಾಕಿ ಉಳಿದಿದ್ದ ಬಾಡಿಗೆ ಹಣವನ್ನು ಕೊಡಲು ವಿಳಂಬ ಮಾಡಿದ್ದ ಬಾಡಿಗೆದಾರರು ಮತ್ತು ಮಂಜುನಾಥ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ, ಸಿಟ್ಟಿಗೆದ್ದ ಕಿಡಿಗೇಡಿಗಳು, ಭಾನುವಾರ ರಾತ್ರಿ 11:30ರ ಸುಮಾರಿಗೆ ವಕೀಲನ ಮನೆಗೆ ನುಗ್ಗಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಶಂಕಿಸಲಾದ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಬೆಂಗಳೂರಿನ ಪಟ್ಟಂದೂರು ಅಗ್ರಹಾರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ 11.30ರ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ಮಂಜುನಾಥ್ ಅವರು ವಕೀಲರಾಗಿ ಕೆಲಸ ಮಾಡುವುದರ ಜತೆಗೆ ರಿಯಲ್ ಎಸ್ಟೇಟ್ ಮತ್ತು ಆಸ್ತಿ ವಹಿವಾಟಿನಲ್ಲಿ ತೊಡಗಿದ್ದರು. ತಮ್ಮ ಹತ್ತಾರು ಎಕರೆಯ ಜಮೀನಿನಲ್ಲಿ ಶೆಡ್ಗಳನ್ನು ನಿರ್ಮಿಸಿ, ಅದನ್ನು ಕೆಲವರಿಗೆ ಬಾಡಿಗೆ ನೀಡಿದ್ದರು. ಆದರೆ, ಕೆಲವು ಸಮಯದಿಂದ ಬಾಡಿಗೆ ಬಾಕಿ ಉಳಿದಿದ್ದ ವಿಚಾರಕ್ಕೆ ವಕೀಲ ಮತ್ತು ಬಾಡಿಗೆದಾರರ ನಡುವೆ ವಾಗ್ವಾದ ನಡೆದಿದೆ.
ಬಾಡಿಗೆ ವಿಚಾರದಲ್ಲಿ ನಡೆದ ಜಗಳದ ಬಳಿಕ ಇಬ್ಬರು ಬಾಡಿಗೆದಾರರು ಮಧ್ಯರಾತ್ರಿ ನೇರವಾಗಿ ಮಂಜುನಾಥ್ ಮನೆಗೆ ಹೋಗಿದ್ದಾರೆ. ಈ ವೇಳೆ, ಜೋರಾಗಿ ಬಾಗಿಲನ್ನು ಬಡಿದಿದ್ದಾರೆ. ಮಂಜುನಾಥ್ ಬಾಗಿಲು ತೆರೆಯುತ್ತಿದ್ದಂತೆ ದುಷ್ಕರ್ಮಿಗಳು ನೇರವಾಗಿ ಅವರ ಹಣೆಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಕೀಲ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿ ಪಡೆದ ಕೂಡಲೇ ವೈಟ್‌ಫೀಲ್ಡ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿಧಿವಿಜ್ಞಾನ ತಜ್ಞರ ಸಹಾಯದಿಂದ ತನಿಖೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಬಾಡಿಗೆ ಪಾವತಿಗೆ ಸಂಬಂಧಿಸಿದಂತೆ ಹಿಂದೆ ಯಾವುದಾದರೂ ಜಗಳ ನಡೆದಿತ್ತಾ? ಗುಂಡಿನ ದಾಳಿಗೂ ಮುನ್ನ ಆರೋಪಿ ಮತ್ತು ಮಂಜುನಾಥ್ ಮಧ್ಯೆ ಆಗಿದ್ದೇನು? ಘಟನೆಗೆ ಬಳಸಿದ ಗನ್ ಎಲ್ಲಿಂದ ಬಂತು? ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).