

ಬೆಂಗಳೂರು: ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮತ್ತು ಸ್ಥಳಾಂತರ ವಿಚಾರವಾಗಿ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಪ್ರಹಸನ ಆಡಳಿತ ಪಕ್ಷ ಕಾಂಗ್ರೆಸ್ಗೆ ಮುಜುಗರ ಉಂಟುಮಾಡಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಮಧ್ಯಪ್ರವೇಶಿಸಿ, ಮನವೊಲಿಸಿದ್ದರಿಂದ ಸದ್ಯಕ್ಕೆ ರಾಜೀನಾಮೆ ನಿರ್ಧಾರದಿಂದ ನಯನಾ ಮೋಟಮ್ಮ ಹಿಂದೆಸರಿದಿದ್ದಾರೆ. ಜಪಾನ್ ಪ್ರವಾಸದಿಂದ ಸಿಎಂ ಡಿ.ಕೆ.ಶಿವಕುಮಾರ್, ವಾಪಸ್ ಬರುವವರೆಗೂ ಕಾಡಾನೆ ಗದ್ದಲಕ್ಕೆ ವಿರಾಮ ಬಿದ್ದಿದೆ.
ನಯನಾ ಮೋಟಮ್ಮ ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ವಿಧಾನಸಭೆ ಸ್ಪೀಕರ್ ಆಪ್ತ ಕಾರ್ಯದರ್ಶಿ ಕಚೇರಿಗೆ ಸೋಮವಾರ ತೆರಳಿದ್ದರು. ಸ್ಪೀಕರ್ ಅವರಿಗೇ ರಾಜೀನಾಮೆ ನೀಡಬೇಕೆಂಬ ಕಾರಣಕ್ಕೆ ವಾಪಸ್ ಆಗಿ ಮಂಗಳವಾರ ಸ್ಪೀಕರ್ ಅವರ ಸಮಯ ಕೋರಿದ್ದರು. ಇದಕ್ಕೆ ಸಾಥ್ ನೀಡಿದ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಕೂಡ ರಾಜೀನಾಮೆ ಬೆದರಿಕೆ ಒಡ್ಡಿದ್ದರು.
ಮುಖ್ಯಮಂತ್ರಿ ಜಪಾನ್ ಪ್ರವಾಸದಲ್ಲಿರುವಾಗ ರಾಜೀನಾಮೆ ವಿಚಾರ ಮುನ್ನೆಲೆಗೆ ಬಂದಿರುವುದಕ್ಕೆ
ಪಕ್ಷದ ಹಿರಿಯ ಶಾಸಕರು, ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ನಯನಾ ಮೋಟಮ್ಮ ಜತೆ ದೂರವಾಣಿ ಮೂಲಕ ಮಾತನಾಡಿದರು. ಮುಖ್ಯಮಂತ್ರಿ ಜಪಾನ್ ಪ್ರವಾಸದಿಂದ ವಾಪಸ್ ಬಂದ ಮೇಲೆ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ಕೊಟ್ಟು ರಾಜೀನಾಮೆ ವಿಚಾರವನ್ನು ಇತ್ಯರ್ಥಪಡಿಸಿದರು.
ಬಿ.ಕೆ. ಹರಿಪ್ರಸಾದ್ ಮಾತನಾಡಿ, ದುಡುಕಿ ರಾಜೀನಾಮೆ ಕೊಡುವುದು ಸರಿಯಲ್ಲ. ಸಿಎಂ ವಿದೇಶ ಪ್ರವಾಸದಿಂದ ಬಂದ ಬಳಿಕ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುತ್ತದೆ. ಈಗಾಗಲೇ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಶಾಸಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಸ್ವತಃ ಸಿಎಂ ಕೂಡ ಶಾಸಕರೊಂದಿಗೆ ಮಾತನಾಡಿದ್ದಾರೆ. ದುಡುಕಿ ರಾಜೀನಾಮೆ ಕೊಡುವ ಬದಲು ಸಮಸ್ಯೆ ಬಗೆಹರಿಸಲು ಕೆಲಸ ಮಾಡಬೇಕು ಎಂಬುದನ್ನು ಗಮನಕ್ಕೆ ತಂದಿದ್ದೇನೆ ಎಂದರು.
ಆನೆಧಾಮವೇ ಪರಿಹಾರ ರಾಜ್ಯದ ಕಾಡಿನಂಚಿನ ಗ್ರಾಮಗಳಲ್ಲಿನ ಆನೆ ಮತ್ತು ಮಾನವ ಸಂಘರ್ಷಕ್ಕೆ ಆನೆಧಾಮ ಪರಿಹಾರ ಆಗಬಲ್ಲದು ಎಂದು ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದ್ದಾರೆ. ನಾನು ಅರಣ್ಯ ಸಚಿವನಾಗಿದ್ದಾಗ ಈ ಯೋಜನೆ ರೂಪಿಸಿದ್ದೆ. ಆದರೆ, ಕೇಂದ್ರ ಸರ್ಕಾರ ಹುಲಿ ಸಂರಕ್ಷಿತ ಧಾಮದಲ್ಲಿ ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿತ್ತು. ತೋಟಗಳಲ್ಲೇ ಹುಟ್ಟಿ, ತೋಟದಲ್ಲೇ ಬೆಳೆಯುವ ಆನೆಗಳಿಂದ ಸಮಸ್ಯೆ ಹೆಚ್ಚಾಗಿದೆ. ಇಂತಹ ಆನೆಗಳನ್ನು ಆನೆಧಾಮದಲ್ಲಿ ಬಿಟ್ಟರೆ ಸಮಸ್ಯೆ ನಿಯಂತ್ರಿಸಬಹುದು. ರಾಮಲಿಂಗಾ ರೆಡ್ಡಿ ಹಿರಿಯ ಮತ್ತು ಅನುಭವಿ ಸಚಿವರು. ಈಗಾಗಲೇ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಬೆಂಗಳೂರು, ಕೋಲಾರಕ್ಕೆ ಬಿಡಲು ಆಗುತ್ತಾ? ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ತಪ್ಪಿಸಲು ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು ಮತ್ತು ಹಾವಳಿ ನೀಡುವ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಬೇಕು ಎಂದು ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಲೆನಾಡಿನ ಜನರು ಹುಟ್ಟಿನಿಂದಲೂ ಆನೆಗಳ ಸಮಸ್ಯೆ ಅನುಭವಿಸುತ್ತಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಆನೆಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಭದ್ರಾ ಅಭಯಾರಣ್ಯದಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದ್ದು, ಅಲ್ಲಿಗೆ ಸ್ಥಳಾಂತರಿಸಬೇಕು. ಅಲ್ಲಿ ಬಿಡದೆ ಕೋಲಾರ, ಬೆಂಗಳೂರಿಗೆ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದರು.