

ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆ ಗುರುವಾರ ನಿರ್ಧರಿಸಿದೆ.
ಹೈಕೋರ್ಟ್ ತಿರ್ಪನ್ನು ಹಾಗೇ ಒಪ್ಪಿಕೊಂಡರೆ ರಾಜ್ಯ ಸರ್ಕಾರ ಪರಿಶಿಷ್ಟರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾದೀತು ಎಂದು ಆಲೋಚಿಸಿ ಮೇಲ್ಮನವಿ ಸಲ್ಲಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸದ್ಯಕ್ಕೆ ಸುಪ್ರೀಂ ಕೋರ್ಟ್ಗೆ ವಿಶೇಷ ಅನುಮತಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದು ಮುಂದಿನ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ನೆರೆಯ ತಮಿಳುನಾಡಿನಲ್ಲಿ ಶೇ. 69ರ ಮೀಸಲು ನೀತಿ ಜಾರಿಯಿರುವುದನ್ನು ಸುಪ್ರೀಂ ಕೋರ್ಟ್ನಲ್ಲಿ ಉಲ್ಲೇಖಿಸಿ ಕರ್ನಾಟಕದಲ್ಲಿ ಶೇ. 56 ಕ್ಕೆ ಹೆಚ್ಚಳ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ತಜ್ಞ ವಕೀಲರನ್ನು ನೇಮಿಸಲು ನಿರ್ಧರಿಸಲಾಯಿತು.
2022 ರಲ್ಲಿ ಆಗಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮೀಸಲನ್ನು ಶೇ.15ರಿಂದ ಶೇ. 17 ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲನ್ನು ಶೇ. 3 ರಿಂದ ಶೇ.7 ಕ್ಕೆ ಹೆಚ್ಚಿಸಿತ್ತು. ಹೀಗಾಗಿ ಮೀಸಲು ಪ್ರಮಾಣ ಶೇ. 50 ರಿಂದ ಶೇ. 56ಕ್ಕೆ ಏರಿಕೆ ಆಗಿತ್ತು
ಇದರ ಪ್ರಕಾರ ನೇಮಕಾತಿ ಅಧಿಸೂಚನೆಗಳನ್ನು ಕೂಡ ಹೊರಡಿಸಲಾಗಿತ್ತು. ಇತ್ತೀಚೆಗೆ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ ವೇಳೆ ಕೆಎಟಿ ಇದಕ್ಕೆ ತಡೆ ನೀಡಿತ್ತು. ಬಳಿಕ ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ ಇತ್ತೀಚೆಗೆ ಶೇ. 56ರ ಮೀಸಲು ಕಾಯ್ದೆ ರದ್ದುಪಡಿಸಿ ಆದೇಶಿಸಿದ್ದರಿಂದ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆ ಆಗಿತ್ತು. ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿಯೂ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿತ್ತು.
ಒಟ್ಟು ಮೀಸಲಾತಿ ಪ್ರಮಾಣವೇ ಶೇ. 50 ರಿಂದ ಶೇ. 50ಕ್ಕೆ ಕುಸಿದರೆ ಒಳಮೀಸಲು ಹಂಚಿಕೆಯಲ್ಲೂ ಕೂಡ ಸರ್ಕಾರಕ್ಕೆ ಸಂಕಷ್ಟ ಎದುರಾಗಿತ್ತು.ಈ ಹಿನ್ನೆಲೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಸುಪ್ರೀಂಗೆ ಹೋಗಲು ನಿರ್ಣಯಿಸಲಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಸಮುದಾಯಗಳ ಹಿತ ಕಾಪಾಡುವ ಭರವಸೆ ಬಿತ್ತಲು ಸರ್ಕಾರಕ್ಕೆ ಈ ತೀರ್ಮಾನ ಕೈಗೊಳ್ಳಲೇಬೇಕಾದ ರಾಜಕೀಯ ಅನಿವಾರ್ಯತೆ ಕೂಡ ಸೃಷ್ಟಿಯಾಗಿತ್ತು.