

ಅವಳಿ ಜಿಲ್ಲೆಯ 1.5 ಲಕ್ಷ ಜನ ಸಜ್ಜು
ಬಳ್ಳಾರಿ: ಕಲಬುರಗಿಯಲ್ಲಿ ಡಿ.10ರಂದು ಹಮ್ಮಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಾಗತ ಸಮಾವೇಶಕ್ಕೆ ನಗರದಿಂದ ಅಂದಾಜು 15 ಸಾವಿರ ಸೇರಿ ಅಖಂಡ ಜಿಲ್ಲೆಯಿಂದ 1.5 ಲಕ್ಷ ಜನರನ್ನು ಕರೆದೊಯ್ಯಲು ಸಿದ್ಧತೆ ನಡೆಯುತ್ತಿದೆ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮತನಾಡಿದರು. ಬಳ್ಳಾರಿಯಿಂದ ಕರೆ ತರುವ ಹೊಣೆಯನ್ನು ಮಾಜಿ ಶಾಸಕರಾದ ಅಲ್ಲಂ ವೀರಭ್ರದಪ್ಪ, ಅನಿಲ್‌ಲಾಡ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಜನರು ಬರುತ್ತಿದ್ದು, ಪಕ್ಷದ ಅಯಾ ತಾಲೂಕು ಮುಖಂಡರಿಗೆ ತಿಳಿಸಿದೆ. ಚುನಾವಣೆ ವರ್ಷ ಆಗಿರುವುದರಿಂದ ಸಮಾರಂಭ ಪಕ್ಷಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಲು ಸಹಕಾರಿಯಾಗಲಿದೆ ಎಂದರು.
ಮಾಜಿ ಶಾಸಕ ಅಲ್ಲಂ ವೀರಭದ್ರಪ್ಪ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ತರುವಲ್ಲಿ ಮಲ್ಲಿಕಾರ್ಜನ ಖರ್ಗೆ ಅವರದು ಮುಖ್ಯ ಪಾತ್ರ ಇದೆ. ಅವರು ಮಾಡಿದ ಕೆಲಸದಿಂದ ಇಂದು ನೂರಾರು ವಿದ್ಯಾರ್ಥಿಗಳು ಸರ್ಕಾರಿ ಕೆಲಸದಲ್ಲಿ ಮೀಸಲಾತಿ ಪಡೆದುಕೊಂಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವ ಖಯಾಲಿ ಬೆಳೆಸಿಕೊಂಡಿದ್ದಾರೆ. 371ಜೆ ಅನುಷ್ಠಾನದಲ್ಲಿ ಮತ್ತು ಪಿಎಸ್‌ಐ ನೇಮಕಾತಿ ಮಾಡಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದೇವೆ. ಘರ್ ವಾಪಸಿ ಕುರಿತು ಕೇಳಿದ ಪ್ರಶ್ನೆಗೆ ಮಲ್ಲಿಕಾರ್ಜನ ಖರ್ಗೆ ಅವರನ್ನು ಬಿಜೆಪಿಯ ವಿಶ್ವನಾಥ್ ಭೇಟಿ ಆಗಿರುವುದು ಕನ್ನಡ ವ್ಯಕ್ತಿ ಅಂತ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.
ಇದಕ್ಕೂ ಮೊದಲು ಪಕ್ಷ ಕಚೇರಿಯಲ್ಲಿ ಸಿದ್ಧತಾ ಸಭೆ ನಡೆಯಿತು. ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಪಕ್ಷದ ನಗರ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಜಿಪಂ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್, ಕೆಪಿಸಿಸಿ ಕಾರ್ಯದರ್ಶಿ ಆಂಜನೇಯಲು, ಮಾಜಿ ಶಾಸಕ ಅನಿಲ್‌ಲಾಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಇತರರು ಇದ್ದರು.
ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷರಾಗಿ ನಿಜಲಿಂಗಪ್ಪ ನಂತರ ಖರ್ಗೆ ಆಯ್ಕೆ ಆಗಿದ್ದಾರೆ. ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಕಲಬುರಗಿಗೆ ಬರುತ್ತಿದ್ದು, ಅವರನ್ನು ಸಂಭ್ರಮದಿಂದ ಸ್ವಾಗತಿಸಲಿದ್ದೇವೆ.| ಎ.ವಿ.ಉಮಾಪತಿ ಮಾಜಿ ಶಾಸಕ, ಬಳ್ಳಾರಿ