ರೈತರಿಗೆ ಪರಿಹಾರ ನೀಡದ ನೀರಾವರಿ ಇಲಾಖೆ ಕಚೇರಿ ಪೀಠೋಪಕರಣ ಜಪ್ತಿ

ಚಿಕ್ಕೋಡಿ ಕಚೇರಿ ಪೀಠೋಪಕರಣ ಜಪ್ತಿ
ಚಿಕ್ಕೋಡಿ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ
ಚಿಕ್ಕೋಡಿ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ
Published on: 

ರೈತರಿಗೆ ಪರಿಹಾರ ನೀಡಲು ನಿರ್ಲಕ್ಷ್ಯ:

ನೀರಾವರಿ ಇಲಾಖೆ ಕಚೇರಿ ಪೀಠೋಪಕರಣ ಜಪ್ತಿ

ವಿಜಯವಾಣಿ‌ ಸುದ್ದಿಜಾಲ ಚಿಕ್ಕೋಡಿ

:ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಾಲಯದ ಆದೇಶದಂತೆ ಹೆಚ್ಚಿನ ಪರಿಹಾರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ, ಪಟ್ಟಣದಲ್ಲಿರುವ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದ್ದಾರೆ.

2002ರಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಗಾಗಿ ನೀರಾವರಿ ಇಲಾಖೆಯು ನಿಪ್ಪಾಣಿ ತಾಲೂಕಿನ ಮತ್ತೆವಾಡಿ ಮತ್ತು ಕುಗನೊಳ್ಳಿ ಗ್ರಾಮದ ರೈತರಿಂದ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಇಲಾಖೆ ನೀಡಿದ್ದ ಪರಿಹಾರ ತೃಪ್ತಿಕರವಾಗಿಲ್ಲದ ಕಾರಣ ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಬೆಳಗಾವಿಯ ಭೂಸ್ವಾಧೀನ ಪ್ರಾಧಿಕಾರ ಟ್ರಿಬುನಲ್ ಕೋರ್ಟ್, ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ 2023ರಲ್ಲಿ ಮಹತ್ವದ ಆದೇಶ ಹೊರಡಿಸಿತ್ತು. ಈ ಪೈಕಿ ಒಂದು ಪ್ರಕರಣದಲ್ಲಿಯೇ ಇಲಾಖೆಯು ಬರೋಬ್ಬರಿ 15 ಲಕ್ಷ ರೂಪಾಯಿ ಹೆಚ್ಚಿನ ಪರಿಹಾರವನ್ನು ರೈತರಿಗೆ ಪಾವತಿಸಬೇಕಾಗಿತ್ತು.

2023ರಲ್ಲಿ ಕೋರ್ಟ್ ಆದೇಶವಾಗಿದ್ದರೂ, ಕಳೆದ ಮೂರು ವರ್ಷಗಳಿಂದ ನೀರಾವರಿ ಇಲಾಖೆ ಅಧಿಕಾರಿಗಳು ರೈತರಿಗೆ ಬಾಕಿ ಪರಿಹಾರದ ಹಣವನ್ನು ಪಾವತಿಸದೆ ವಿಳಂಬ ಧೋರಣೆ ಅನುಸರಿಸಿದ್ದರು. ಇದರಿಂದ ಬೇಸತ್ತ ರೈತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಪ್ತಿ ವಾರಂಟ್ ಜಾರಿಗೊಳಿಸಿದ್ದು, ಇಂದು ಚಿಕ್ಕೋಡಿಯ ನೀರಾವರಿ ಇಲಾಖೆ ಕಚೇರಿಗೆ ಆಗಮಿಸಿದ ಕೋರ್ಟ್ ಸಿಬ್ಬಂದಿ ಹಾಗೂ ವಕೀಲರು ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಕುರ್ಚಿ, ಟೇಬಲ್ ಹಾಗೂ ಟ್ರೆಜರಿ ಸೇರಿದಂತೆ ಎಲ್ಲಾ ಪೀಠೋಪಕರಣಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.