

ಚಿಕ್ಕೋಡಿಲಿ ನಿರಂತರ ಕುಡಿಯುವ ನೀರಿಗೆ ಬರ!
| ಯೋಜನೆ ಅನುಷ್ಠಾನಕ್ಕೆ ಗ್ರಹಣ | ತಪ್ಪದ ಶುದ್ಧ ಜಲ ಬವಣೆ
ಆನಂದ ಭಮ್ಮನ್ನವರ ಚಿಕ್ಕೋಡಿ
ಹೊಸ ಜಿಲ್ಲೆ ಸ್ಥಾನಮಾನ ಸನಿಹದಲ್ಲಿರುವ ಚಿಕ್ಕೋಡಿ ಪಟ್ಟಣದಲ್ಲಿ ನಿರಂತರ(೨೪*೭) ಕುಡಿಯುವ ನೀರು ಒದಗಿಸುವ ಯೋಜನೆಗೆ ಗ್ರಹಣ ಹಿಡಿದಿದ್ದು, ಕೋಟ್ಯಾಂತರ ರೂ. ಸುರಿದರೂ ಜನರಿಗೆ ನಿರಂತರ ನೀರು ಮಾತ್ರ ಮರಿಚೀಕೆಯಾಗಿದೆ.
ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪ್ರಸ್ತುತ ೨೩ ವಾರ್ಡ್ಗಳನ್ನು ಹೊಂದಿದ್ದು, ೪೫ ಸಾವಿರಕ್ಕೂ ಅಽಕ ಜನಸಂಖ್ಯೆ ಹೊಂದಿದೆ. ಇಲ್ಲಿ ೮,೮೦೪ ನೀರು ಸರಬರಾಜು ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಜನರಿಗೆ ಮಾತ್ರ ಸಮರ್ಪಕ ನೀರು ಪೂರೈಕೆಯಾಗದೆ ೫ಅಥವಾ ೧೦ ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದ್ದರಿಂದ ಜನರು ಹಣ ನೀಡಿ ಶುದ್ಧ ನೀರು ಪಡೆಯುವಂತಾಗಿದೆ.
ಮೊದಲ ಹಂತ ವಿಫಲ: ನಿರಂತರ ನೀರು ಪೂರೈಕೆಗಾಗಿ ೨೦೧೪ರಲ್ಲಿ ನಗಾರಾಭಿವೃದ್ಧಿ ಇಲಾಖೆಯಿಂದ ೪೬.೫೯ ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ತಾಲೂಕಿನ ಕಲ್ಲೋಳ ಬಳಿ ಜಾಕ್ವೇಲ್ ನಿರ್ಮಿಸಿ ಕೃಷ್ಣಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಸುವ ಯೋಜನೆ ಆರಂಭಿಸಿ ಕಾಮಗಾರಿ ೨೦೧೯ರಲ್ಲಿ ಪೂರ್ಣಗೊಂಡಿದೆ. ಇದರಲ್ಲಿ ಪೈಪಲೈನ್, ನೀರಿನ ತೊಟ್ಟಿ, ನಲ್ಲಿಗಳಿಗೆ ಮೀಟರ್ ಅಳವಡಿಸಿದ್ದರೂ ನೀರು ಬರಲ್ಲಿಲ್ಲ, ಕಾರಣ ಕೃಷ್ಣಾ ನದಿಯಿಂದ ಪಟ್ಟಣಕ್ಕೆ ಅಳವಡಿಸಿರುವ ಪೈಪಲೈನ್ ಪದೇ ಪದೆ ಹಾಳಾಗುತ್ತಿದೆ. ಜತೆಗೆ ವಿದ್ಯುತ್ ಕಡಿತದಿಂದ ನೀರು ಪೂರೈಕೆಗೆ ಅಡ್ಡಿಯಾಗುತ್ತಿದೆ.
ಎರಡನೇ ಹಂತದ ಪ್ರಯತ್ನ ಆರಂಭ: ಮೊದಲ ಹಂತದ ಯೋಜನೆಯಿಂದ ೨೪*೭ ನೀರು ಸರಬರಾಜು ಯೋಜನೆ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆ ೨೦೨೪ರಲ್ಲಿ ಅಮೃತ-೨ ಯೋಜನೆಯಲ್ಲಿ ಮತ್ತೆ ೧೭.೪೯ ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಿಸಿದೆ. ಇದರಲ್ಲಿ ಮಾಂಜರಿ ಜಾಕ್ವೇಲ್ದಿಂದ ಕೇರೂರ ನೀರು ಶುದ್ಧಿಕರಣ ಘಟಕದವರೆಗೆ ೧೩ ಕೀ.ಮಿ. ಹಾಗೂ ಪಟ್ಟಣದಲ್ಲಿ ೧೫ ಕೀ.ಮಿ. ನೀರು ಸರಬರಾಜು ಪೈಪ್ಲೈನ್ ಅಳವಡಿಸಲಾಗುತ್ತಿದೆ.
--ಬಾಕ್ಸ್--
ಪ್ರತಿ ದಿನ ಬೇಕಿದೆ ೬.೯ ಎಂಎಲ್ಡಿ ನೀರು
ಪಟ್ಟಣದಲ್ಲಿ ಅಳವಡಿಸಿರುವ ಒಟ್ಟು ೮,೮೦೪ ನಲ್ಲಿಗಳಿಗೆ ನಿರಂತರ ನೀರು ಪೂರೈಸಲು ೬.೯ ಎಂಎಲ್ಡಿ(ಮಿಲಿಯನ್ ಲೀಟರ್ ಪರ್ ಡೆ) ನೀರು ಬೇಕಾಗುತ್ತದೆ. ಆದರೆ, ಪ್ರಸ್ತುತವಾಗಿ ನಿರಂತರ ವಿದ್ಯುತ್ ಪೂರೈಕೆಯಾದಲ್ಲಿ ಶುದ್ಧಿಕರಣ ಘಟಕದಿಂದ ೫.೪೦ ಎಂಎಲ್ಡಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಹೊಸ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ಹೆಚ್ಚಿನ ನೀರು ಪೂರೈಕೆಯಾಗುವ ಸಾಧ್ಯತೆಯಿದೆ. ಕಾಮಗಾರಿಗೆ ವೇಗ ನೀಡಿ, ವಿದ್ಯುತ್ ಸಮಸ್ಯೆ ನಿವಾರಿಸುವ ಮೂಲಕ ಜನರಿಗೆ ನಿರಂತರ ನೀರು ಒದಗಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
--ಕೋಟ್--
ಚಿಕ್ಕೋಡಿ ಪಟ್ಟಣ ಕಳೆದ ಹತ್ತು ವರ್ಷದಲ್ಲಿ ಬೆಳವಣಿಗೆಯಾಗಿದ್ದು, ವಿದ್ಯುತ್ ಸಮಸ್ಯೆಯಿಂದ ನಿರಂತರ ನೀರು ಒದಗಿಸಲು ಸಮಸ್ಯೆಯಾಗುತ್ತಿದೆ. ಎರಡನೇ ಹಂತದ ಯೋಜನೆ ಪೂರ್ಣಗೊಂಡ ನಂತರ ನಿರಂತರ ನೀರು ಸರಬರಾಜಾಗುವ ವಿಶ್ವಾಸವಿದೆ.
| ಮಹಾಂತೇಶ ನಿಡೋಣಿ ಪುರಸಭೆ ಮುಖ್ಯಾಧಿಕಾರಿ(ಹೆಚ್ಚುವರಿ), ಚಿಕ್ಕೋಡಿ