ಖಾಕಿ ಪಡೆಗೆ ಟೆಂಟ್ ಟೌನ್‌ಶಿಪ್ ನಿರ್ಮಾಣ

-2,500 ಪೊಲೀಸರ ಬಂದೋಬಸ್ತ್‌ಗೆ ಸಕಲ ಸಿದ್ಧತೆ
All preparations for the deployment of 2,500 police officers
ಬೆಳಗಾವಿ ಸುವರ್ಣ ವಿಧಾನಸೌಧದ ಸಮೀಪದ ಅಲಾರವಾಡ ಗ್ರಾಮದ ಹೊರವಲಯದಲ್ಲಿ ಪೊಲೀಸ್ ಸಿಬ್ಬಂದಿ ನಿರ್ಮಾಣಗೊಂಡಿರುವ ಟೆಂಟ್‌ಹೌಸ್..
Published on: 

ಬೆಳಗಾವಿ:ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.2ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನದ ಭದ್ರತಾ ಹೊಣೆ ಹೊತ್ತಿರುವ ಪೊಲೀಸ್ ಸಿಬ್ಬಂದಿಗೆ ಒಂದೇ ಸ್ಥಳದಲ್ಲಿ ಊಟ, ವಸತಿ ಸೇರಿದಂತೆ ಹೈಟೆಕ್ ಸೌಲಭ್ಯಗಳನ್ನು ಒಳಗೊಂಡಿರುವ ತಾತ್ಕಾಲಿಕ ಟೆಂಟ್ ಟೌನ್‌ಶಿಪ್ ನಿರ್ಮಾಣಗೊಂಡಿದೆ.

ಹೌದು.ಸುವರ್ಣ ವಿಧಾನಸೌಧದ ಸಮೀಪದ ಅಲಾರವಾಡ ಗ್ರಾಮದ ಹೊರವಲಯದಲ್ಲಿ 2,500 ಪೊಲೀಸ್ ಸಿಬ್ಬಂದಿಗಾಗಿ ಬೃಹತ್ ವಸತಿ ಟೌನ್‌ಶಿಪ್ ನಿರ್ಮಿಸಲಾಗಿದೆ. ಇಲ್ಲಿ ತಲಾ 100 ಅಡಿ ಅಗಲ, 200 ಅಡಿ ಉದ್ದದ ನಾಲ್ಕು ಬೃಹತ ಟೆಂಟ್‌ಗಳನ್ನು ಅಳವಡಿಸಲಾಗಿದೆ. ಜತೆಗೆ ಪೊಲೀಸ್ ಅಧಿಕಾರಿಗಳ ವಾಸ್ತವ್ಯಕ್ಕಾಗಿ ಪ್ರತ್ಯೇಕ ಸಣ್ಣ ಟೆಂಟ್ ಕೂಡ ನಿರ್ಮಿಸಲಾಗಿದೆ.ಪ್ರತಿಯೊಂದು ದೊಡ್ಡ ಟೆಂಟ್‌ನಲ್ಲಿ 500 ಪೊಲೀಸ್ ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು ಐದು ಟೆಂಟ್‌ಗಳಲ್ಲಿ 2,500 ಸಿಬ್ಬಂದಿಗೆ ವಸತಿ ಸೌಲಭ್ಯ ದೊರೆಯಲಿದೆ. ಸಿಬ್ಬಂದಿಯ ವಿಶ್ರಾಂತಿಗೆ ಕಾಟ್, ಹಾಸಿಗೆ, ತಲೆದಿಂಬು ಹಾಗೂ ಬೆಡ್‌ಶೀಟ್‌ಗಳನ್ನು ಒದಗಿಸಲಾಗಿದೆ.

ಸಾವಿರಾರು ಸಿಬ್ಬಂದಿಯ ವಾಸ್ತವ್ಯವಷ್ಟೇ ಅಲ್ಲದೆ, ಅವರ ದೈನಂದಿನ ಆಹಾರ ಹಾಗೂ ಮೂಲಭೂತ ಸೌಲಭ್ಯಗಳಿಗೂ ವಿಶೇಷ ಗಮನ ನೀಡಲಾಗಿದೆ. ಒಂದೇ ಸ್ಥಳದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕುಡಿಯುವ ನೀರು, ಶೌಚಗೃಹ, ಸ್ನಾನಗೃಹ ಹಾಗೂ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ. ಅಲ್ಲದೆ, ತೀವ್ರ ಚಳಿ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಬ್ಬಂದಿ ಚಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಕರ್ತವ್ಯದ ಒತ್ತಡದ ನಡುವೆಯೂ ಸಿಬ್ಬಂದಿ ವಿಶ್ರಾಂತಿ ಪಡೆದು ಮತ್ತೆ ಬಂದೋಬಸ್ತ್ ಕಾರ್ಯಕ್ಕೆ ಸಜ್ಜಾಗಲು ಅನುಕೂಲವಾಗಲಿದೆ.

...................

ಬಾಕ್ಸ್

ಗರ್ಭಿಣಿ ಸಿಬ್ಬಂದಿಗೆ ಕರ್ತವ್ಯದಿಂದ ವಿನಾಯಿತಿ

ಈ ಬಾರಿ ಪೊಲೀಸ್ ಇಲಾಖೆ ಸಿಬ್ಬಂದಿಯ ಆರೋಗ್ಯ ಮತ್ತು ವೈಯಕ್ತಿಕ ಪರಿಸ್ಥಿತಿಗೂ ಆದ್ಯತೆ ನೀಡಿದೆ. ಗರ್ಭಿಣಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಎರಡು ವರ್ಷದೊಳಗಿನ ಮಕ್ಕಳಿರುವ ಮಹಿಳಾ ಸಿಬ್ಬಂದಿಗೆ ಅಧಿವೇಶನದ ಭದ್ರತಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಚಳಿಯ ವಾತಾವರಣದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವವರು, ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಸಿಬ್ಬಂದಿ ಮತ್ತು ನಿವೃತ್ತಿ ಅಂಚಿನಲ್ಲಿರುವ ಪೊಲೀಸ್ ಸಿಬ್ಬಂದಿಗೆ ಠಾಣೆಗಳಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

......................

ಕೋಟ್ಸ್

ಈ ಬಾರಿ ಚಳಿಗಾಲ ಅಧಿವೇಶನ ಭದ್ರತಗಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರುವ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಗರ್ಭಿಣಿ ಮಹಿಳಾ ಸಿಬ್ಬಂದಿಗೆ ವಿನಾಯಿತಿ ನೀಡಲಾಗಿದ್ದು, ಯುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜವಾಬ್ದಾರಿ ವಹಿಸಲಾಗುತ್ತಿದೆ.

-ಪ್ರಕಾಶ ನಿಕ್ಕಂ, ನಗರ ಪೊಲೀಸ್ ಆಯುಕ್ತ

.........