ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಗ್ರಹಣ

ಪ್ರಾದೇಶಿಕ ಅಸಮತೋಲನ ನಿವಾರಣೆ ಮರೀಚಿಕೆ
ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಗ್ರಹಣ
Published on: 

ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಗ್ರಹಣ
| ಪ್ರಾದೇಶಿಕ ಅಸಮತೋಲನ ನಿವಾರಣೆ ಮರೀಚಿಕೆ | ಬಜೆಟ್‌ನಲ್ಲಿ ೫ ಸಾವಿರ ಕೋಟಿ ರೂ.ಗೆ ಆಗ್ರಹ
ಆನಂದ ಭಮ್ಮನ್ನವರ, ಬೆಳಗಾವಿ
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಹಕಾರಿಯಾಗಬೇಕಿದ್ದ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಕೇವಲ ಬಜೆಟ್ ಘೋಷಣೆಯಾಗಿ ಮಾತ್ರ ಉಳಿದಿದ್ದು, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂಬ ಒತ್ತಾಯ ಮತ್ತೆ ಮುನ್ನೆಲೆಗೆ ಬಂದಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಭಿವೃದಿಗಾಗಿ ೨೦೨೨ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ `ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ' ರಚಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದರು. ಇದು ಉತ್ತರ ಕರ್ನಾಟಕ ಭಾಗದ ಜನರಲ್ಲಿ ಸಮಗ್ರ ಅಭಿವೃದ್ಧಿಯ ಆಶಾಭಾವನೆ ಮೂಡಿಸಿತ್ತು. ಆದರೆ ಮಂಡಳಿ ಘೋಷಣೆಯಾಗಿ ನಾಲ್ಕು ವರ್ಷಗಳು ಕಳೆದರೂ, ಮಂಡಳಿ ರಚಿಸಲಾಗಿಲ್ಲ, ಮಂಡಳಿಗೆ ಬೇಕಿದ್ದ ೫ ಸಾವಿರ ಕೋಟಿ ರೂ. ಅನುದಾನವನ್ನೂ ಹಂಚಿಕೆ ಮಾಡಿಲ್ಲ. ಮಂಡಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಿತ್ತೂರ ಕರ್ನಾಟಕ ಭಾಗದಲ್ಲಿರುವ ಹಿಂದುಳಿದ ತಾಲೂಕುಗಳನ್ನು ಗುರುತಿಸಿ, ಅಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು. ಶಾಲೆ-ಕಾಲೇಜುಗಳ ಅಭಿವೃದ್ಧಿ, ಬಸ್ ಸೌಕರ್ಯ, ರಸ್ತೆ, ಆಸ್ಪತ್ರೆ, ನೀರಾವರಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂಬುದು ಜನರ ಬಹುದಿನಗಳ ಬೇಡಿಕೆಯಾಗಿದೆ.
-------------------
ಜನರ ಹಕ್ಕೊತ್ತಾಯಗಳು
* ನಿರ್ದಿಷ್ಟ ಕಾಲಮಿತಿಯೊಳಗೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಬೇಕು.
* ಈ ಭಾಗದ ಹಿಂದುಳಿದ ತಾಲೂಕುಗಳನ್ನು ಗುರುತಿಸಲು ತಜ್ಞರ ಸಮಿತಿ ರಚಿಸಬೇಕು.
* ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ಒತ್ತು ನೀಡಬೇಕು.
* ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವ ಜನರನ್ನು ಮಂಡಳಿಗೆ ನೇಮಿಸಬೇಕು.
* ಮಂಡಳಿಗೆ ಪ್ರತಿ ಬಜೆಟ್‌ನಲ್ಲಿ ಕನಿಷ್ಠ ೫ ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು.
-------------------
ಶಾಸಕರು ಧ್ವನಿ ಎತ್ತಲಿ  :
ಇತರ ಪ್ರದೇಶಗಳಿಗೆ ಹೋಲಿಸಿದರೆ, ಕಿತ್ತೂರು ಕರ್ನಾಟಕ ಭಾಗ ಆರ್ಥಿಕವಾಗಿ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದ ಶಿಕ್ಷಣ, ಆರೋಗ್ಯ, ಸಾಕ್ಷರತೆ ವಿಭಾಗಗಳಲ್ಲಿ ಹಿಂದುಳಿದಿದೆ. ಈ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ವಿಶೇಷ ಆರ್ಥಿಕ ಪ್ಯಾಕೇಜ್‌ನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ಪ್ರದೇಶದ ಎಲ್ಲ ಶಾಸಕರು ಈ ಬಾರಿಯ ಅಽವೇಶನದಲ್ಲಿ ಪಕ್ಷಾತೀತವಾಗಿ ಮಂಡಳಿ ರಚನೆ ಕುರಿತು ಧ್ವನಿಎತ್ತಬೇಕಿದೆ.
-------------------
ಕೋಟ್...
ಕಳೆದ ಬಾರಿಯ ಅಽವೇಶನದಲ್ಲಿ ಈ ಭಾಗದ ೫೫ ಶಾಸಕರು ಒಗ್ಗೂಡಿ ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅನುದಾನ ನೀಡುವಂತೆ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೆವು. ಅವರು ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ತಿಳಿಸಿದ್ದರು. ಆದರೆ, ಸಿಎಂ ಬದಲಾದ್ದರಿಂದ ಅದು ನನೆಗುದಿಗೆ ಬಿದ್ದಿತ್ತು. ಮಂಡಳಿ ರಚನೆ ಕುರಿತು ಈ ಬಾರಿಯ ಅಧಿವೇಶನದಲ್ಲಿ ಮತ್ತೆ ಒತ್ತಾಯಿಸಲಾಗುವುದು.
| ಎಚ್.ಎಸ್.ಕೋನರೆಡ್ಡಿ
ಶಾಸಕ, ನವಲಗುಂದ