ಒಂದು ಎಕರೆಯಲ್ಲಿ ೧೦೦ ಟನ್ ಕಬ್ಬು

ಬೆಡಕಿಹಾಳ ಗ್ರಾಮದ ರೈತನ ಸಾಧನೆ
ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದ ರೈತ ಚಂದ್ರಕಾಂತ ಚೌಹಾನ್ ಬೆಳೆದಿರುವ ಕಬ್ಬು.
ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದ ರೈತ ಚಂದ್ರಕಾಂತ ಚೌಹಾನ್ ಬೆಳೆದಿರುವ ಕಬ್ಬು.
Published on: 

ಒಂದು ಎಕರೆಯಲ್ಲಿ ೧೦೦ ಟನ್ ಕಬ್ಬು!

| ಮಳೆ ಕೊರತೆ ನಡುವೆ ಬಂಪರ್ ಬೆಳೆ | ಸಾವಯವ, ಸಗಣಿ ಗೊಬ್ಬರ ಬಳಕೆ

ಆನಂದ ಭಮ್ಮನ್ನವರ ಚಿಕ್ಕೋಡಿ

ಮಳೆ ಕೊರತೆ, ಗೊಣ್ಣೆಹುಳು ಬಾಧೆಯಿಂದ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಕುಸಿದಿದೆ. ಇಂಥ ವಿಪರೀತ ಪರಿಸ್ಥಿತಿಯಲ್ಲೂ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ರೈತ ಚಂದ್ರಕಾಂತ ಚೌಹಾಣ  ಒಂದು ಎಕರೆ ಜಮೀನಿನಲ್ಲಿ ೧೦೦ ಟನ್ ಕಬ್ಬು ಬೆಳೆದು ಗಮನಸೆಳೆದಿದ್ದಾರೆ.

ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯಗಳ ನಡುವೆ, ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ಅಧಿಕಾರಿಗಳ ಮಾರ್ಗದರ್ಶನದಿಂದ ಚಂದ್ರಕಾಂತ ಕಬ್ಬು ಬೆಳೆಯಲ್ಲಿ ಯಶಸ್ಸು ಕಂಡಿದ್ದಾರೆ.

ಚಂದ್ರಕಾಂತ ೨೦೨೫ರ ಜುಲೈಯಲ್ಲಿ ಎರಡು ಸಾಲುಗಳ ನಡುವೆ ನಾಲ್ಕೂವರೆ ಅಡಿ ಅಂತರ ಬಿಟ್ಟು ಕಬ್ಬು ನಾಟಿ ಮಾಡಿದ್ದರು. ತಮ್ಮ ಹೊಲದಲ್ಲಿರುವ ಎರಡು ಕೊಳವೆಬಾವಿಗಳ ಮೂಲಕ ತುಂತುರು ನೀರಾವರಿ ಕ್ರಮ ಅಳವಡಿಸಿಕೊಂಡು ಬೆಳೆಗೆ ನಿಯಮಿತವಾಗಿ ನೀರು ಪೂರೈಸಿದ್ದರು. ಕೃಷಿ ಯಂತ್ರೋಪಕರಣ, ಕೂಲಿ ಕಾರ್ಮಿಕರ ವೆಚ್ಚ, ಕೀಟನಾಶಕ, ಸಾವಯವ ಗೊಬ್ಬರ ಹಾಗೂ ಸಗಣಿ ಗೊಬ್ಬರ ಸೇರಿದಂತೆ ಒಟ್ಟು ೪೦ ಸಾವಿರ ರೂ. ವೆಚ್ಚ ಮಾಡಿದ್ದರು. ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಸರಾಸರಿ ೪೦ರಿಂದ ೫೦ ಟನ್ ಕಬ್ಬು ಬೆಳೆಯುವ ಪ್ರದೇಶದಲ್ಲಿ ೧೦೦ ಟನ್ ಇಳುವರಿ ಪಡೆದು ಇನ್ನುಳಿದ ರೈತರಿಗೆ ಮಾದರಿಯಾಗಿದ್ದಾರೆ.

---------

ಬಾಕ್ಸ್...

ಅಂತರ ಬೆಳೆಯಾಗಿ ೧೪ ಕ್ವಿಂಟಾಲ್ ಶೇಂಗಾ!

ರೈತ ಚಂದ್ರಕಾಂತ ಕಬ್ಬಿನ ಸಾಲುಗಳ ನಡುವೆ ಬದುವಿನಲ್ಲಿ ಅಂತರ ಬೆಳೆಯಾಗಿ ಶೇಂಗಾ ಕೂಡ ಬೆಳೆದಿದ್ದು, ಬರೋಬ್ಬರಿ ೧೪ ಕ್ವಿಂಟಾಲï ಶೇಂಗಾ ಇಳುವರಿ ದೊರೆತಿದೆ. ಕಬ್ಬಿನ ಬೆಳೆಯೊಂದಿಗೆ ಅಂತರ ಬೆಳೆಯಿಂದಲೂ ಹೆಚ್ಚುವರಿ ಆದಾಯ ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ವೈಜ್ಞಾನಿಕ ನಾಟಿ ಪದ್ಧತಿ, ಸಮರ್ಪಕ ನೀರಿನ ನಿರ್ವಹಣೆ ಹಾಗೂ ಸಮತೋಲಿತ ಗೊಬ್ಬರ ಬಳಕೆಯಿಂದ ಎಕರೆಗೆ ೧೦೦ ಟನ್ ಕಬ್ಬು ಹಾಗೂ ೧೪ ಕ್ವಿಂಟಾಲ್ ಶೇಂಗಾ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂಬುದು ರೈತನ ಅಭಿಪ್ರಾಯವಾಗಿದೆ.

---------

ಕೋಟ್...

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವುದು ಮುಖ್ಯ. ಕೃಷಿ ಅಧಿಕಾರಿಗಳ ತಾಂತ್ರಿಕ ಮಾರ್ಗದರ್ಶನದಿಂದ ಈ ಬಾರಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ. ನೀರಿನ ಕೊರತೆ ನಡುವೆಯೂ ಎಕರೆಗೆ ೧೦೦ ಟನ್ ಕಬ್ಬು ಇಳುವರಿ ಲಭಿಸಿರುವುದು ಸಂತಸ ತಂದಿದೆ.  

ಚಂದ್ರಕಾಂತ ಚೌಹಾಣ

ಕಬ್ಬು ಬೆಳೆಗಾರರ. ಬೇಡಕಿಹಾಳ