ಸಂತ್ರಸ್ತರ ಕಣ್ಣೀರೊರೆಸಿದ ಸಚಿವ ಸತೀಶ್ ಜಾರಕಿಹೊಳಿ

ನಗರದ ಚವ್ಹಾಟಗಲ್ಲಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಪರಿಶೀಲಿಸಿದರು.
ನಗರದ ಚವ್ಹಾಟಗಲ್ಲಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಪರಿಶೀಲಿಸಿದರು.
Published on
ಬೆಳಗಾವಿ: ಕ್ಷಣಾರ್ಧದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಚವ್ಹಾಟಗಲ್ಲಿಯ ಫ್ರಿಡ್ಜ್ ಸ್ಫೋಟದ ದುರಂತದ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬದವರ ನೋವು ಆಲಿಸಿದರು.
ದುರಂತದ ಸ್ಥಳಕ್ಕೆ ಆಗಮಿಸಿದ ಸಚಿವರು, ಘಟನೆಯ ಭೀಕರತೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಕುಟುಂಬಸ್ಥರೊಂದಿಗೆ ಮಾತನಾಡಿ, ದುಃಖದಲ್ಲಿ ಅವರೊಂದಿಗೆ ಸರ್ಕಾರ ನಿಲ್ಲಲಿದೆ ಎಂಬ ಭರವಸೆ ನೀಡಿ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಸಚಿವರು, “ಈ ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ಹೊರಬರಬೇಕು. ತಪ್ಪು ಯಾರದ್ದೇ ಆಗಿದ್ದರೂ, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ನೆರವು, ಗಾಯಾಳುಗಳ ಚಿಕಿತ್ಸಾ ವ್ಯವಸ್ಥೆ ಹಾಗೂ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಮನೆ ಇಲ್ಲದವರಿಗೆ ನೆರವಾಗುವ ಉದ್ದೇಶದಿಂದ 50 ಸಾವಿರ ನಿವೇಶನಗಳನ್ನು ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದ ಸಚಿವರು, ಜನರು ತಮ್ಮ ವಾಸಸ್ಥಳ ಬದಲಿಸಲು ಹಿಂದೇಟು ಹಾಕುವ ಪರಿಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚವ್ಹಾಟಗಲ್ಲಿಯ ದುರಂತಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಿ, ಘಟನೆಯ ಹೊಣೆಗಾರಿಕೆಯನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ವರದಿಗಾಗಿ ಕಾಯಲಾಗುತ್ತಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಪ್ರಕಾಶ್ ನಿಕಂ, ಮೇಯರ್ ಪ್ರೀತಿ ಕಾಮಕರ್ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net