ರಸ್ತೆಗುಂಡಿ ಮುಚ್ಚಲು ಎಐ ತಂತ್ರಜ್ಞಾನ ಮೊರೆ ಹೋದ ಬಿಬಿಎಂಪಿ

Vijayavani-Featured-Image
Published on

ಬೆಂಗಳೂರು: ನಗರದಲ್ಲಿ ಉಂಟಾಗಿರುವ ರಸ್ತೆಗುಂಡಿಗಳನ್ನು ಮುಚ್ಚಲು ಪಾಲಿಕೆಯು ಎಐ ತಂತ್ರಜ್ಞಾನದ ಮೊರೆ ಹೋಗಿದ್ದು, ಅತ್ಯಾಧುನಿಕ ಕ್ಯಾಮರಾಗಳನ್ನು ಬಳಸಿ ಸೆರೆಹಿಡಿಯುವ ದೃಶ್ಯಾವಳಿ ಆಧರಿಸಿ ಪರಿಹಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಾಹನಗಳಿಗೆ ಕ್ಯಾಮರಾ ಅಳವಡಿಸಿ ಅದರಿಂದ ಗುಂಡಿಗಳ ನಿಖರ ಚಿತ್ರಗಳನ್ನು ಸೆರೆಹಿಡಿಯಲಾಗುವುದು. ವಾಹನವು ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಾಗುವುದಿದ್ದು, ನಿತ್ಯ 4-5 ಕಿ.ಮೀ.ವರೆಗೆ ಕಾರ್ಯಾಚರಣೆ ನಡೆಸಲಿದೆ. ಇದಕ್ಕಾಗಿ 15 ಕ್ಯಾಮರಾಗಳನ್ನು ಬಳಸಿಕೊಳ್ಳಲಿದ್ದು, ಮೊದಲಿಗೆ 300 ಕಿ.ಮೀ. ಉದ್ದದ ರಸ್ತೆಗಳಲ್ಲಿ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲಾಗುವುದು. ಒಟ್ಟು 1,400 ಕಿ.ಮೀ. ವ್ಯಾಪ್ತಿಯಲ್ಲಿ ಇಂತಹ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಹಾಲಿ ಗುರುತಿಸಿರುವ 6 ಸಾವಿರ ರಸ್ತೆಗುಂಡಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ. ಆರ್.ಆರ್.ನಗರ ಹಾಗೂ ದಾಸರಹಳ್ಳಿ ವಲಯ ಹೊರತುಪಡಿಸಿ ಉಳಿದ ವಲಯಗಳಲ್ಲಿ ಮೇ 31ರೊಳಗೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಗರದಲ್ಲಿ ರಸ್ತೆಬದಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಐದು ವರ್ಷದ ಹಿಂದೆ ಕರೆದಿದ್ದ ಟೆಂಡರ್ ಪೂರ್ಣಗೊಂಡಿದ್ದು, ಹೊಸದಾಗಿ ಟೆಂಡರ್ ಕರೆದಿಲ್ಲ. ಎಲ್‌ಇಡಿಗೆ ಬದಲಾಯಿಸುತ್ತಿರುವ ಕಾರಣ ಪಾಲಿಕೆಗೆ ಹೆಚ್ಚಿನ ಹಣ ಉಳಿತಾಯವಾಗಲಿದೆ. ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net