ಹಂಗಾರಕಟ್ಟೆ ತಲುಪಿದ ಬಾರ್ಜ್

kota
Published on

ಕೋಟ: ಕೋಡಿಬೇಂಗ್ರೆ, ಹಂಗಾರಕಟ್ಟೆ ನಡುವೆ ಸಂಪರ್ಕ ಕೊಂಡಿಯಾದ ಬಾರ್ಜ್ ವ್ಯವಸ್ಥೆ-ಅವ್ಯವಸ್ಥೆಗೆ ತಲುಪಿ ನಾಲ್ಕು ತಿಂಗಳು ಕಳೆಯಿತು. ಸ್ಥಳೀಯರು ಬಾರ್ಜ್ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ಶೋಚನೀಯವಾಗಿತ್ತು. ಸ್ಥಳೀಯ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಹಿತ ಹಲವು ಗಣ್ಯರು ಸಾಕಷ್ಟು ಬಾರಿ ಸರ್ಕಾರದ ಕದ ತಟ್ಟಿ ಇದೀಗ ಬಾರ್ಜ್ ಕಾರವಾರದಿಂದ ಹಂಗಾರಕಟ್ಟೆ ತಲುಪಿದೆ. ಶನಿವಾರ ಮುಂಜಾನೆ ಬಾರ್ಜ್ ಕಾರವಾರದಿಂದ ಹೊರಟು ಸಂಜೆ ಹಂಗಾರಕಟ್ಟೆ ಬಂದರು ಪ್ರದೇಶ ತಲುಪಿದೆ. ಕೋಡಿ ಬೇಂಗ್ರೆಯಲ್ಲಿ ಬಾರ್ಜ್ ಸಿಬ್ಬಂದಿಯ ಮುಖ್ಯಸ್ಥರಿಗೆ ಪುಷ್ಪ ಗುಚ್ಛ ನೀಡುವ ಮೂಲಕ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಮೈತ್ರಿ ಯುವಕ ಮಂಡಲ ಕೋಡಿಬೇಂಗ್ರೆ ಅಧ್ಯಕ್ಷ ಕೀರ್ತಿ ಕುಮಾರ್, ಮಹಾಕಾಳಿ ದೇವಸ್ಥಾನ ಕೋಡಿಬೇಂಗ್ರೆ ಅಧ್ಯಕ್ಷ ಸಂತೋಷ್ ನಾಯ್ಕ, ವಿಠಲ ರುಕ್ಮಯ ದೇವಸ್ಥಾನ ಕೋಡಿಬೇಂಗ್ರೆ ಅಧ್ಯಕ್ಷ ಅಶೋಕ್ ಬಿ.ಕುಂದರ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೋಡಿಬೇಂಗ್ರೆ ಅಧ್ಯಕ್ಷ ನವೀನ್ ಕುಂದರ್, ಹಂಗಾರಕಟ್ಟೆ ಕೋಡಿಬೇಂಗ್ರೆ ಗ್ರಾಮಸ್ಥರು ಉಪಸ್ಥಿತರಿದ್ದರು. ಹಂಗಾರಕಟ್ಟೆ ಕೋಡಿ ಬೇಂಗ್ರೆ ನಡುವಿನ ಸಂಪರ್ಕಿಸುವ ಬಾರ್ಜ್‌ನ್ನು ಅ.8ರಂದು ಬಂದುರು, ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಸರ್ಕಾರದ ಮೇಲೆ ನಿರಂತರ ಒತ್ತಡಕ್ಕೆ ಕೋಡಿಬೇಂಗ್ರೆ ಹಂಗಾರಕಟ್ಟೆ ಬಾರ್ಜ್ ವ್ಯವಸ್ಥೆ ಸುಗಮವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರಿಗೆ, ಮಾಧ್ಯಮಕ್ಕೆ, ಗ್ರಾಮಸ್ಥರ ಪರವಾಗಿ ಧನ್ಯವಾದಗಳು. ಹಾಗೆಯೇ ಬಾರ್ಜ್ ಸೇವೆ ಸರ್ಕಾರವೇ ನಡೆಸಬೇಕು. ಖಾಸಗಿಗೆ ಕೊಡಬಾರದು ಎಂಬ ಮನವಿ ಕೂಡಾ ಈ ವೇಳೆ ಮಾಡುತ್ತಿದ್ದೇವೆ. -ಪ್ರಸಾದ್ ತಿಂಗಳಾಯ, ಕೋಡಿ ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net