ಬಿಜೆಪಿ ಸ್ಥಿತಿ ಬೂದಿಮುಚ್ಚಿದ ಕೆಂಡ!

ಲೋಕಸಭೆ, ವಿಧಾನಸಭೆ ಹಾಗೂ ಇತ್ತೀಚಿನ ಸಂಡೂರು ಉಪಚುನಾವಣೆಯಲ್ಲಿ ಸತತ ಮುಖಭಂಗ ಅನುಭವಿಸಿರುವ ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಅಪಸ್ವರ ಕೇಳಿ ಬಂದಿದೆ. ಪಕ್ಷವನ್ನು ಮರುಸಂಘಟಿಸುವ ಜಿಲ್ಲಾಧ್ಯಕ್ಷರೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ.
BJP
ಬೂದಿ ಮುಚ್ಚಿದ ಕೆಂಡದಂತಿರುವ ಬಳ್ಳಾರಿ ಜಿಲ್ಲಾ ಬಿಜೆಪಿ: ಒಗ್ಗಟ್ಟಿನ ಕೊರತೆ, ಕಾರ್ಯಕರ್ತರಲ್ಲಿ ಅಸಮಾಧಾನ (ಸಾಂಕೇತಿಕ ಚಿತ್ರ)
Published on: 

ವಿಜಯವಾಣಿ ಸುದ್ದಿಜಾಲ ಬಳ್ಳಾರಿ

ಲೋಕಸಭೆ, ವಿಧಾನಸಭೆ ಹಾಗೂ ಇತ್ತೀಚಿನ ಸಂಡೂರು ಉಪಚುನಾವಣೆಯಲ್ಲಿ ಸತತ ಮುಖಭಂಗ ಅನುಭವಿಸಿರುವ ಜಿಲ್ಲಾ ಬಿಜೆಪಿ ಘಟಕದಲ್ಲಿ ಅಪಸ್ವರ ಕೇಳಿ ಬಂದಿದೆ. ಪಕ್ಷವನ್ನು ಮರುಸಂಘಟಿಸುವ ಜಿಲ್ಲಾಧ್ಯಕ್ಷರೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ.

ಪಕ್ಷದ ಬಲವರ್ಧನೆಗೆ ಮುಂಬರುವ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾವಣೆಗಳು ನಿರ್ಣಾಯಕ ಎನಿಸಿವೆ. ಆದರೆ, ಇತ್ತೀಚೆಗೆ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ನಾಯ್ಡು ನೇತೃತ್ವದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಏಕಪಕ್ಷೀಯ ನಿರ್ಧಾರವೆಂಬ ಆರೋಪವಿದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷಿಸಿ, ನಾಯಕರ ಬೆಂಬಲಿಗರಿಗೆ ಹಾಗೂ ನಿರ್ದಿಷ್ಟ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಸ್ವತಃ ಮಾಜಿ ಜಿಲ್ಲಾಧ್ಯಕ್ಷರೊಬ್ಬರು ಗಂಭೀರ ಆರೋಪ ಮಾಡಿರುವುದು ಪಕ್ಷದೊಳಗಿನ ಬೇಸರ ಬಹಿರಂಗಗೊಂಡಿದೆ.

ಸಮಸ್ಯೆಗಳಿದ್ದರೂ ಮೌನ

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾಲು ಸಾಲು ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಮಹಾನಗರ ಪಾಲಿಕೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಮತ್ತು ಜಿಲ್ಲಾ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ಈವರೆಗೆ ಸರ್ಕಾರದ ವಿರುದ್ಧ ಒಂದೇ ಒಂದು ಬೃಹತ್ ಹೋರಾಟ ರೂಪಿಸಿಲ್ಲ. ರಾಜ್ಯ ಅಥವಾ ಕೇಂದ್ರ ನಾಯಕರ ಕರೆ ಬಂದಾಗ ಮಾತ್ರ ಜಿಲ್ಲಾಧ್ಯಕ್ಷ ನೇತೃತ್ವದಲ್ಲಿ ಗಡಗಿ ಚನ್ನಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಸಂಚಾರ ದಟ್ಟಣೆ ಉಂಟುಮಾಡಿ ಕಣ್ಣೊರೆಸುವ ತಂತ್ರ ಮಾಡುತ್ತಿದೆಯೇ ಹೊರತು, ಸ್ಥಳೀಯ ಜ್ವಲಂತ ಸಮಸ್ಯೆಗಳ ಕುರಿತು ಜನಪರ ಹೋರಾಟ ನಡೆಸಲು ವಿಫಲವಾಗಿದೆ.

ತೋರಿಕೆಗಷ್ಟೇ ಒಗ್ಗಟ್ಟು

ಜಿಲ್ಲೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಜಿ. ಜನಾರ್ದನ ರೆಡ್ಡಿ, ಮಾಜಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ ಹಾಗೂ ಟಿ. ಸುರೇಶ್‌ಬಾಬು ಅವರಂತಹ ಪ್ರಭಾವಿ ನಾಯಕರಿದ್ದರೂ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಮಾಧ್ಯಮಗಳನ್ನು ಭೇಟಿಯಾಗಲು ನಾಯಕರು ಒಂದೇ ವೇದಿಕೆ ಬಳಸುತ್ತಿಲ್ಲ. ಜನಾರ್ದನ ರೆಡ್ಡಿ ಅವರು ತಮ್ಮ ಗ್ಲಾಸ್‌ಹೌಸ್ ಬಳಸಿದರೆ, ಶ್ರೀರಾಮುಲು ತಮ್ಮ ನಿವಾಸದಲ್ಲೇ ಮಾಧ್ಯಮಗೋಷ್ಠಿ ನಡೆಸುತ್ತಾರೆ. ಸೋಮಶೇಖರರೆಡ್ಡಿ, ಎಂಎಲ್ಸಿ ವೈ.ಎಂ. ಸತೀಶ್ ಇತರರು ಪಕ್ಷದ ಕಚೇರಿ ನೆಚ್ಚಿಕೊಂಡಿದ್ದಾರೆ. ಯಾರು ಸುದ್ದಿಗೋಷ್ಠಿ ಕರೆಯುತ್ತಾರೋ ಅವರ ಬೆಂಬಲಿಗರು ಮಾತ್ರ ಅಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಜ್ಯ ಮಟ್ಟದ ನಾಯಕರು ಜಿಲ್ಲೆಗೆ ಬಂದಾಗ ಮಾತ್ರ ಒಂದೇ ವೇದಿಕೆಯಲ್ಲಿ ನಸುನಗುತ್ತಾ ಕಾಣಿಸಿಕೊಳ್ಳುವ ನಾಯಕರು, ಆ ಬಳಿಕ ತಮ್ಮದೇ ಆದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಹಿಂದೂ ಜಾಗರಣ ವೇದಿಕೆಯಿಂದ ಗಾಂಧಿಭವನ ಹಾಗೂ ಸೆಂಟರ್‌ನರಿ ಹಾಲ್‌ನಲ್ಲಿ ಎರಡು ಪ್ರತ್ಯೇಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಎರಡು ಹಿಂದೂ ಮಹಾಗಣಪತಿಯಾದರೂ ಗಾಂಧಿಭವನದ ಗಣೇಶ ಶೋಭಾಯಾತ್ರೆಯಲ್ಲಿ ಬಿಜೆಪಿ ಸ್ಥಳೀಯ ನಾಯಕರನ್ನು ಕಡೆಗಣಿಸಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಮ್ಮ ಬೆಂಬಲಿತರಿಗೆ ಹೆಚ್ಚಿನ ಮನ್ನಣೆ ನೀಡಿದ್ದಾರೆ ಎನ್ನಲಾಗಿದೆ.

ಸಾರಥ್ಯ ಬದಲಾವಣೆ ಕೂಗು

ಕೆಲ ವರ್ಷಗಳ ಹಿಂದೆ ಕಾರ್ಯಕರ್ತರ ಬೆಂಬಲದಿಂದ ಜಿಲ್ಲೆಯೂ ಬಿಜೆಪಿ ಭದ್ರಕೋಟೆಯಾಗಿತ್ತು. ಆದರೆ, ಇತ್ತೀಚೆಗೆ ಕಾರ್ಯಕರ್ತರನ್ನು ಮನ್ನಣೆಗೆ ತೆಗೆದುಕೊಳ್ಳದೇ ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಪಕ್ಷದ ಬಲವರ್ಧನೆಗೆ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂಬ ಕೂಗು ಕೇಳಿ ಬಂದಿದೆ. ನವೆಂಬರ್‌ನಲ್ಲಿ ಅವಧಿ ಪೂರ್ಣಗೊಳ್ಳಲಿದ್ದು, ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡಲಿ ಎಂಬುದು ಕಾರ್ಯಕರ್ತರ ಮನದಾಳದ ಮಾತಾಗಿದೆ. ಒಟ್ಟಾರೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಜಿಲ್ಲಾ ಬಿಜೆಪಿಯಲ್ಲಿ ನಾಯಕರ ನಿಲುವು ಹಾಗೂ ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಿರ್ಧಾರಗಳು ಕೆಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಕಾದು ನೋಡಬೇಕಿದೆ. ಪಕ್ಷದ ಕಾರ್ಯಕರ್ತರ ಅಪಸ್ವರ ಬಗ್ಗೆ ವಿಚಾರಿಸಲು ಜಿಲ್ಲಾಧ್ಯಕ್ಷರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ.

ಬಿಜೆಪಿ ಜಿಲ್ಲಾಧ್ಯಕ್ಷರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ಮಾಡುತ್ತಿದ್ದಾರೆ. ಘಟಕದ ಪದಾಧಿಕಾರಿಗಳ ನೇಮಕದಲ್ಲಿ ಪಕ್ಷದ ಹಿರಿಯ ನಾಯಕರ ಮಾತುಗಳನ್ನು ಕಡೆಗಣಿಸಿದ್ದಾರೆ. ತಮ್ಮ ಬೆಂಬಲಿತರಿಗೆ ಪಕ್ಷದಲ್ಲಿ ಅವಕಾಶ ನೀಡಿದ್ದಾರೆ.
ಜಿ.ಸೋಮಶೇಖರರೆಡ್ಡಿ ಮಾಜಿ ಶಾಸಕ, ಬಿಜೆಪಿ, ಬಳ್ಳಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net