ಇಟ್ಟಿಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸರ್ಕಾರಿ ಸಹಾಯಕ ಅಭಿಯೋಜಕ ಅಜ್ಜಯ್ಯ ಕೆ. ಉದ್ಘಾಟಿಸಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಜೈನ್, ವಕೀಲರಾದ ಕೊಟ್ರೇಶ್ ಎ, ಹನುಮಂತಪ್ಪ ಇತರರಿದ್ದರು.
ಹೂವಿನಹಡಗಲಿ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಹೆಣ್ಣು ಮಕ್ಕಳನ್ನು ಬಾಲ್ಯದಲ್ಲಿಯೇ ಮದುವೆ ಮಾಡಿಕೊಡುತ್ತಿದ್ದು ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕ ಅಜ್ಜಯ್ಯ ಕೆ. ಹೇಳಿದರು.
ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಇತ್ತೀಚಿಗೆ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕು ವಕೀಲರ ಸಂಘದಿಂದ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಲ್ಯ ವಿವಾಹ ಕಾನೂನ ಬಾಹಿರ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ಸರ್ಕಾರಿ ಕಚೇರಿ ಇತರ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದು ಕಂಡು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಜಾರಿಯಲ್ಲಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಜೈನ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕೊಟ್ರೇಶ್ ಎ, ಹಿರಿಯ ವಕೀಲರಾದ ಹನುಮಂತಪ್ಪ, ಚನ್ನಬಸಯ್ಯ ಸ್ವಾಮಿ, ಪ್ರಮುಖರಾದ ಚನ್ನಮ್ಮ, ಬಸವರಾಜ, ಮಲ್ಲಿಕಾರ್ಜುನ, ಶ್ರೀಕಾಂತ ಇತರರಿದ್ದರು.